ವಕ್ಫ್ ಇಲಾಖೆಯ ದರ್ಗಾ, ಮಸೀದಿಗಳಲ್ಲಿ ‘ಇ-ಹುಂಡಿ’ ಆ್ಯಪ್: ಸಚಿವ ಝಮೀರ್ ಅಹ್ಮದ್

Update: 2023-06-27 16:39 GMT

ಬೆಂಗಳೂರು, ಜೂ.27: ಮುಜರಾಯಿ ಇಲಾಖೆಯ ದೇವಾಲಯಗಳ ಮಾದರಿಯಲ್ಲಿ ವಕ್ಫ್ ಇಲಾಖೆಯ ವ್ಯಾಪ್ತಿಯಲ್ಲಿರುವ ದರ್ಗಾ ಹಾಗೂ ಮಸೀದಿಗಳಿಗೆ ಕಾಣಿಕೆ ಮತ್ತು ದೇಣಿಗೆ ನೀಡಲು ‘ಇ-ಹುಂಡಿ’ ಆ್ಯಪ್ ವ್ಯವಸ್ಥೆ ಸಿದ್ದಪಡಿಸಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ತಿಳಿಸಿದರು.

ಮಂಗಳವಾರ ನಗರದ ಶೇಷಾದ್ರಿಪುರದಲ್ಲಿರುವ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಸಮ್ಮೇಳನ ಸಭಾಂಗಣದಲ್ಲಿ ನಡೆದ ರಾಜ್ಯ ವಕ್ಫ್ ಮಂಡಳಿಯ ಸಭೆಯಲ್ಲಿ ನೂತನ ಆ್ಯಪ್ ಗೆ ಚಾಲನೆ ನೀಡಿ ಅವರು ಮಾತನಾಡಿದರು.

ದರ್ಗಾ ಹಾಗೂ ಮಸೀದಿಗಳಿಗೆ ಸಮುದಾಯ ನೀಡುವ ಕಾಣಿಕೆ ಹಾಗೂ ದೇಣಿಗೆ ದುರುಪಯೋಗ ಆಗದಂತೆ ಜತೆಗೆ ನಿಗದಿತ ಉದ್ದೇಶಕ್ಕೆ ಬಳಕೆ ಆಗುವಂತೆ ನೋಡಿಕೊಳ್ಳಲು ಈ ಆ್ಯಪ್ ಸಿದ್ದಪಡಿಸಲಾಗಿದೆ. ಬೆಂಗಳೂರಿನ ಹಝ್ರತ್ ತವಕ್ಕಲ್ ಮಸ್ತಾನ್ ಶಾ ದರ್ಗಾ ದಲ್ಲಿ ಇ-ಹುಂಡಿ ವ್ಯವಸ್ಥೆ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ ಎಂದು ಅವರು ತಿಳಿಸಿದರು.

ಮುಂದಿನ ದಿನಗಳಲ್ಲಿ ವಕ್ಫ್ ವ್ಯಾಪ್ತಿಗೆ ಬರುವ 3131 ದರ್ಗಾ, 10,398 ಮಸೀದಿಗಳಲ್ಲೂ ಜಾರಿಗೊಳಿಸಲಾಗುವುದು. ಸಮುದಾಯ ಎಲ್ಲಿಂದ ಯಾವುದೆ ಸಮಯದಲ್ಲೂ ಫೆÇೀನ್ ಪೇ, ಗೂಗಲ್ ಪೇ ಮೂಲಕ ದೇಣಿಗೆ, ಕಾಣಿಕೆ ನೀಡಬಹುದಾಗಿದೆ ಎಂದು ಝಮೀರ್ ಅಹ್ಮದ್ ತಿಳಿಸಿದರು.

ಒತ್ತುವರಿ ತೆರವಿಗೆ ಕ್ರಮ: ವಕ್ಫ್ ವ್ಯಾಪ್ತಿಯಲ್ಲಿರುವ ಆಸ್ತಿಗಳ ಒತ್ತುವರಿ ತೆರವು ಬಗ್ಗೆ ವಿಶೇಷ ಗಮನ ನೀಡಲಾಗುವುದು. ಒಟ್ಟು 46 ಸಾವಿರ ಎಕರೆಯಷ್ಟು ವಕ್ಫ್ ಆಸ್ತಿಯಿದ್ದು ಹಲವು ಪ್ರಕರಣ ನ್ಯಾಯಾಲಯದಲ್ಲಿದ್ದು ಇತ್ಯರ್ಥಕ್ಕೆ ಅಡ್ವೋಕೆಟ್ ಜನರಲ್ ಜತೆ ಚರ್ಚಿಸಲಾಗುವುದು. ಬಜೆಟ್ ನಂತರ ವಕ್ಫ್ ಆಸ್ತಿ ಅದಾಲತ್ ನಡೆಸಲಾಗುವುದು ಎಂದು ಅವರು ಘೋಷಿಸಿದರು.

ವಕ್ಫ್ ಆಸ್ತಿಗಳನ್ನು ಕೆಲವು ಸರಕಾರಿ ಇಲಾಖೆಗಳೂ ಒತ್ತುವರಿ ಮಾಡಿದ್ದು, ಆ ಬಗ್ಗೆ ಗಮನಹರಿಸಿ ತೆರವು ಮಾಡಲಾಗುವುದು. ಖಾಸಗಿಯವರ ಒತ್ತುವರಿ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಒಟ್ಟು ಎಷ್ಟು ಆಸ್ತಿ ಒತ್ತುವರಿ ಆಗಿದೆ ಸರಕಾರಿ ಮತ್ತು ಖಾಸಗಿ ಸೇರಿ ಎಂಬುದರ ಬಗ್ಗೆ ಹಾಗೂ ನ್ಯಾಯಾಲಯದಲ್ಲಿರುವ ಪ್ರಕರಣಗಳ ಬಗ್ಗೆ ಪಟ್ಟಿ ಮಾಡಿ ಕೊಡುವಂತೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ವಿಂಡ್ಸರ್ ಮ್ಯಾನರ್ ಹೋಟೆಲ್ ಜಾಗಕ್ಕೆ ಕಡಿಮೆ ಬಾಡಿಗೆ ನಿಗದಿ ಆಗಿದ್ದು ಮಾರುಕಟ್ಟೆ ದರದ ಪ್ರಕಾರ 2 ಕೋಟಿ ರೂ.ವರೆಗೂ ಬರಬೇಕಿದೆ. ಈ ಬಗ್ಗೆ ನ್ಯಾಯಾಲಯದಲ್ಲಿ ಹೋರಾಟ ನಡೆಸಬೇಕಿದೆ ಎಂದು ವಕ್ಫ್ ಮಂಡಳಿ ಸದಸ್ಯರು ಪ್ರಸ್ತಾಪ ಮಾಡಿದರು. ಈ ಕುರಿತು ಪ್ರತ್ಯೇಕ ಸಭೆ ನಡೆಸಲಾಗುವುದು ಎಂದು ಝಮೀರ್ ಅಹ್ಮದ್ ತಿಳಿಸಿದರು.

ಸಭೆಯಲ್ಲಿ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿ, ಸದಸ್ಯರಾದ ಆರ್.ಅಬ್ದುಲ್ ರಿಯಾಝ್ ಖಾನ್, ಆಸೀಫ್ ಅಲಿ ಶೇಕ್, ಯಾಕೂಬ್ ಯೂಸುಫ್, ಅನ್ವರ್ ಬಾಷ, ಮೌಲಾನ ಅಝರ್ ಆಬಿದಿ, ಹಝ್ರತ್ ಹಮೀದ್ ಶಾ ದರ್ಗಾ ಸಮಿತಿಯ ಆಡಳಿತಾಧಿಕಾರಿ ಜಿ.ಎ.ಬಾವ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

'ಶಿಕ್ಷಣ ಸಂಸ್ಥೆ ಅಭಿವೃದ್ಧಿಗೆ ಬಳಕೆ'

ವಕ್ಫ್ ಮಂಡಳಿಯಲ್ಲಿ 45 ಕೋಟಿ ರೂ.ಅನುದಾನ ಲಭ್ಯವಿದ್ದು ಅದನ್ನು ಶಾಲಾ, ಕಾಲೇಜು ಕಟ್ಟಡ ನಿರ್ಮಾಣ, ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಬಳಕೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News