ಖಾಸಗಿ ಶಾಲೆಗಳಲ್ಲಿ ನಿಗದಿಪಡಿಸಿರುವ ಶುಲ್ಕದ ವಿವರ ನೋಟೀಸ್ ಬೋರ್ಡ್‍ನಲ್ಲಿ ಪ್ರಕಟಿಸಲು ಶಿಕ್ಷಣ ಇಲಾಖೆ ಆದೇಶ
Update: 2024-05-23 16:28 GMT
ಬೆಂಗಳೂರು: ರಾಜ್ಯದ ಎಲ್ಲ ಖಾಸಗಿ ಶಾಲೆಗಳಲ್ಲಿ 2024-25ನೇ ಶೈಕ್ಷಣಿಕ ಸಾಲಿಗೆ ವಿದ್ಯಾರ್ಥಿಗಳ ದಾಖಲಾತಿ ಮತ್ತು ಶುಲ್ಕ ವಸೂಲಾತಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ದಾಖಲಾತಿ ಪ್ರಕ್ರಿಯೆ, ದಾಖಲಾತಿ ಶುಲ್ಕ ಮತ್ತು ಇನ್ನಿತರೆ ಶುಲ್ಕವನ್ನು ಪಡೆಯುವ ವಿವರವನ್ನು ತಮ್ಮ ಶಾಲಾ ಜಾಲತಾಣದಲ್ಲಿ, ಶಾಲಾ ಸೂಚನಾ ಫಲಕದಲ್ಲಿ(ನೋಟೀಸ್ ಬೋರ್ಡ್) ಸಾರ್ವಜನಿಕರು ಮತ್ತು ಪೋಷಕರಿಗೆ ಲಭ್ಯವಾಗುವಂತೆ ಪ್ರಕಟಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಆದೇಶಿಸಿದೆ.
ಶಿಕ್ಷಣ ಹಕ್ಕು ಕಾಯ್ದೆ-2009ರ ಸೆಕ್ಷನ್-2(ಬಿ)ರಂತೆ ಸಾರ್ವಜನಿಕರು ಮತ್ತು ಪೋಷಕರಿಗೆ ಲಭ್ಯವಾಗುವಂತೆ ಮಾಹಿತಿಯನ್ನು ಪ್ರಕಟಿಸದೇ, ಉಲ್ಲಂಘಿಸಿರುವ ಬಗ್ಗೆ ದೂರುಗಳು ದಾಖಲಾದಲ್ಲಿ, ಕರ್ನಾಟಕ ಕಡ್ಡಾಯ ಮತ್ತು ಉಚಿತ ಪ್ರಾಥಮಿಕ ಶಿಕ್ಷಣ ಹಕ್ಕು ನಿಯಮಗಳು-2012ರ ನಿಯಮ-23ರಲ್ಲಿ ತಿಳಿಸಿದಂತೆ ಅಗತ್ಯ ಕ್ರಮವಹಿಸಬೇಕು ಎಂದು ರಾಜ್ಯದ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಉಪನಿರ್ದೇಶಕರಿಗೆ ಸೂಚಿಸಲಾಗಿದೆ.