ರಾಜ್ಯದ ಸರ್ವಾಂಗೀಣ ಅಭಿವೃದ್ದಿಗೆ ಒತ್ತು ನೀಡುವ ಪ್ರಯತ್ನ ಬಜೆಟ್ ನಲ್ಲಿ ಆಗಿದೆ: ಸಿಎಂ ಸಿದ್ದರಾಮಯ್ಯ

Update: 2024-02-16 14:12 GMT

ಬೆಂಗಳೂರು: ರಾಜ್ಯದ ಬಡವರು, ಮಹಿಳೆಯರು, ಯುವಕರು, ಪರಿಶಿಷ್ಟ ಜಾತಿ , ವರ್ಗದವರು, ಅಲ್ಪಸಂಖ್ಯಾತರಿಗೆ ಕೊಂಡುಕೊಳ್ಳುವ ಶಕ್ತಿ ಹೆಚ್ಚು ಮಾಡುವ ಪ್ರಯತ್ನ ಹಾಗೂ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡುವ ಪ್ರಯತ್ನವೂ ಬಜೆಟ್ ನಲ್ಲಿ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು 2024-25 ನೇ ಸಾಲಿನ ಆಯವ್ಯಯವನ್ನು ಮಂಡಿಸಿದ ನಂತರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

ದೇಶದಲ್ಲಿ ನಿರುದ್ಯೋಗ, ಹಣದುಬ್ಬರುದ ಸಮಸ್ಯೆಗಳಿಂದ ಬಡವರು ಜೀವನ ಸಾಗಿಸುವುದು ಕಷ್ಟವಾಗಿದೆ. ಬಡವರ ಕೊಳ್ಳುವ ಶಕ್ತಿಯನ್ನು ಹೆಚ್ಚು ಮಾಡಲು ಗ್ಯಾರಂಟಿ ಯೋಜನೆಗಳನ್ನು ರೂಪಿಸಲಾಗಿದೆ. ಈ ಆರ್ಥಿಕ ವರ್ಷದಲ್ಲಿ ನಾವು ಅಧಿಕಾರಕ್ಕೆ ಬಂದು 9 ತಿಂಗಳಾಗುವ ಮೊದಲೇ ನಾವು ಜನತೆಗೆ ಕೊಟ್ಟಿದ್ದ ಭರವಸೆಗಳನ್ನು ಈಡೇರಿಸಲಾಗಿದೆ. ಇದರೊಂದಿಗೆ ಕೃಷಿ, ನೀರಾವರಿ, ಲೋಕೋಪಯೋಗಿ, ಇಂಧನ, ಗ್ರಾಮೀಣಾಭಿವೃದ್ಧಿ, ಬರಗಾಲ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುವ ದೃಷ್ಟಿಯಿಂದ ಹಾಗೂ ಅಭಿವೃದ್ಧಿಗೆ ಹಣ ಕೊಡುವ ಕೆಲಸವನ್ನೂ ಮಾಡಲಾಗಿದೆ ಎಂದು ಅಭಿಪ್ರಾಯಪಟ್ಟರು.

ಅಭಿವೃದ್ಧಿಗೂ ಅನುದಾನ

2024-25 ನೇ ಸಾಲಿಗೆ 3,71,383 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಲಾಗಿದೆ. ಕಳೆದ ವರ್ಷ ಬಜೆಟ್ ಗಾತ್ರ 3,27,747 ಕೋಟಿ ರೂ.ಇತ್ತು. ಕಳೆದ ಬಜೆಟ್ ಗಿಂತ 46,636 ಕೋಟಿ ರೂ. ಹೆಚ್ಚಾಗಿದೆ. ಜುಲೈನಲ್ಲಿ ಮಂಡಿಸಿದ ಬಜೆಟ್ ಗಾತ್ರಕ್ಕಿಂತ ಬೆಳವಣಿಗೆಯಲ್ಲಿ ಶೇ. 13 ರಷ್ಟು ಬೆಳವಣಿಗೆಯಾಗಿದೆ.

ಈ ವರ್ಷ 36,000 ಕೋಟಿ ರೂ. ಗ್ಯಾರಂಟಿಗಳಿಗೆ ಕೊಟ್ಟಿದ್ದರೂ ಕೂಡ ಅಭಿವೃದ್ಧಿಗೂ ಅನುದಾನವನ್ನು ಮೀಸಲಿರಿಸಿದ್ದೇವೆ. ಬರಗಾಲ ನಡುವೆಯೂ 240 ತಾಲ್ಲೂಕುಗಳಲ್ಲಿ 223 ತಾಲ್ಲೂಕುಗಳು ಬರಪೀಡಿತವಾಗಿದ್ದು , ಸುಮಾರು 35,000 ಕೋಟಿ ರೂ. ಆಹಾರದ ಉತ್ಪಾದನೆಯಲ್ಲಿ ನಷ್ಟವಾಗಿದೆ. 18171 ಕೋಟಿ ರೂ.ಗಳನ್ನು ಎನ್ ಡಿ ಆರ್ ಎಫ್ ಮಾರ್ಗಸೂಚಿಗಳ ಪ್ರಕಾರ ಬರಪರಿಹಾರವನ್ನು ಕೇಂದ್ರ ಸರ್ಕಾರವನ್ನು ಕೋರಲಾಗಿದೆ. ಎನ್.ಡಿ.ಆರ್ ಎಫ್ ಅನುದಾನ ನಿಗದಿ ಮಾಡುವುದು ಹಣಕಾಸು ಆಯೋಗದವರು. ಅದು ರಾಜ್ಯದಿಂದ ಸಂಗ್ರಹಿಸಿರುವ ಹಣ. ಕೇಂದ್ರ ಸರ್ಕಾರದ ಅನುದಾನವಲ್ಲ. ಐದು ತಿಂಗಳಾದರೂ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ, ಸಭೆಯನ್ನೂ ಕರೆದಿಲ್ಲ ಎಂದು ವಿವರಿಸಿದರು.

ಬಿಜೆಪಿಗೆ ಸಂಸದೀಯ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ

ಬಿಜೆಪಿಯವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ವಿಧಾನಸಭೆಯಲ್ಲಿ ಬಜೆಟ್ ಮಂಡಿಸುವಾಗ ವಾಕ್ ಔಟ್ ಮಾಡಿದ ನಿದರ್ಶನ ಇಲ್ಲ. ಬಜೆಟ್ ಓದಲು ಪ್ರಾರಂಭ ಮಾಡಿದ ಕೂಡಲೇ ಸುನೀಲ್ ಕುಮಾರ್ ಅವರು 'ಏನಿಲ್ಲ ಏನಿಲ್ಲ ಎಂದು ಘೋಷಣೆ ಕೂಗುತ್ತಿದ್ದರು. ಬಿಜೆಪಿಗೆ ಸಂಸದೀಯ, ಪ್ರಜಾಫ್ರಭುತ್ವ ಹಾಗೂ ಸಂವಿಧಾನಾತ್ಮಕ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ ಎಂದರು.

ಕನ್ನಡಿಗರಿಗೆ ಅನ್ಯಾಯವಾದರೂ ಸುಮ್ಮನಿರಬೇಕೇ?

ಕೇಂದ್ರದಿಂದ ರಾಜ್ಯಕ್ಕಾದ ಅನ್ಯಾಯವನ್ನು ಜನರಿಗೆ ಹೇಳುವುದು ನನ್ನ ಕರ್ತವ್ಯ ಹಾಗೂ ಜವಾಬ್ದಾರಿ. ಅವರು ಕೂಡ ಕೋಲೆಬಸವನ ಹಾಗೆ ತಲೆ ಅಲ್ಲಾಡಿಸದೇ ಕೇಂದ್ರದವರನ್ನು ಕೇಳಬೇಕಿತ್ತು. ಕೋಲಾರ ಸಂಸದ ಮುನಿಸ್ವಾಮಿಯವರು ಅವರು ಸಂಸತ್ತಿನಲ್ಲಿ ಒಂದು ದಿನವೂ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಬಾಯಿಬಿಡಲಿಲ್ಲ. ಐದು ವರ್ಷದಲ್ಲಿ ಒಂದು ಬಾರಿಯಾದರೂ ಮಾತನಾಡಿದ್ದಾರಾ? ಅವರು ಸಂಸದರಾಗಲು ಲಾಯಕ್ಕೇ ಎಂದರು.

ರಾಜಕೀಯ ಮಂಜು ಕವಿದಿದೆ

ಕೇಂದ್ರ ಹಣಕಾಸು ಸಚಿವೆ ಹಾಗೂ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಜೆಟ್ ಬಾಷಣದ ಭಾಗವನ್ನು ಓದಿ ಹೇಳಿದ ಮುಖ್ಯಮಂತ್ರಿಗಳು, ಪ್ಲಕಾರ್ಡ್ ಹಿಡಿದು ಬಂದರೆ ಕರ್ನಾಟಕದ ಜನರಿಗೆ ಮಾಡುವ ದ್ರೋಹ ಎಂದರು. ಇದು ಪ್ರಜಾಪ್ರಭುತ್ವ ವಿರೋಧಿ ಅಲ್ಲವೇ ? ನಾನು ಈ ವರ್ಷ ಗ್ಯಾರಂಟಿಗಳಿಗೆ 36000 ಕೋಟಿ ಕೊಟ್ಟಿಲ್ಲ ಎಂದು ಸಾಬೀತು ಪಡಿಸಲಿ. ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡಿಲ್ಲ ಎಂದು ಸಾಬೀತು ಮಾಡಲಿ. ಚರ್ಚೆ ಮಾಡಬಹುದಿತ್ತು. ಅದಕ್ಕೆ ಇವರ ತಲೆಯಲ್ಲಿ ಏನೂ ಇಲ್ಲ, ರಾಜಕೀಯ ಮಂಜು ಕವಿದಿದೆ. ಕನ್ನಡಿಗರ ಜನದ್ರೋಹದ ಕೆಲಸ ಮಾಡಿದ್ದಾರೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News