ಕೊಳೆತ ಮೊಟ್ಟೆ ಪೂರೈಕೆ ಪ್ರಕರಣ: ರಾಜ್ಯವ್ಯಾಪಿ ತನಿಖೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆದೇಶ

Update: 2023-07-15 14:05 GMT

ಬೆಂಗಳೂರು, ಜು.15: ಅಂಗನವಾಡಿ ಕೇಂದ್ರಗಳಲ್ಲಿ ಕಳಪೆ ಮೊಟ್ಟೆ ವಿತರಣೆಯಾಗುತ್ತಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಕೊಳೆತ ಮೊಟ್ಟೆ ಪೂರೈಕೆ ಪತ್ತೆಯಾದ ಸ್ಥಳ ಮಾತ್ರವಲ್ಲದೆ, ರಾಜ್ಯವ್ಯಾಪಿ ತನಿಖೆಗೆ ಆದೇಶಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಶನಿವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಕ್ಕಳಿಗೆ ಉತ್ತಮ ಗುಣಮಟ್ಟದ ಆಹಾರ ಪೂರೈಕೆಯು ಸರಕಾರದ ಕಾಳಜಿಯಾಗಿದೆ. ಪತ್ತೆಯಾದ ಸ್ಥಳದಲ್ಲಿ ಕ್ರಮವಹಿಸಿದರೆ ಸಾಲದು ಎಂದು ರಾಜ್ಯಮಟ್ಟದ ಅಧಿಕಾರಿಗೆ ತನಿಖೆ ಜವಾಬ್ದಾರಿ ಒಪ್ಪಿಸಿದ್ದು, ವರದಿ ಸಲ್ಲಿಕೆಯಾದ ನಂತರ ಕ್ರಮವಹಿಸುವೆ ಎಂದು ಅವರು ಮಾಹಿತಿ ನೀಡಿದರು.

ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿ ಟೆಂಡರ್ ಕರೆದು ಮೊಟ್ಟೆ ಪೂರೈಕೆ ಗುತ್ತಿಗೆ ನೀಡಿರುವ ಕಾರಣ ಆಯಾ ಅಧಿಕಾರಿಗಳಿಗೆ ನೋಟಿಸ್ ನೀಡಿ ಕ್ರಮವಹಿಸಲು ತಿಳಿಸಲಾಗಿದೆ. ಅದೇ ರೀತಿ, ಈಗಾಗಲೇ ಕಳಪೆ ಮೊಟ್ಟೆಗಳು ಸ್ಥಳಕ್ಕೆ ಸಂಬಂಧಿಸಿದ ಪೂರೈಕೆದಾರರಿಗೆ ನೋಟಿಸ್ ನೀಡಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ 67,570 ಅಂಗನವಾಡಿ ಕೇಂದ್ರಗಳು ಮತ್ತು 2,329 ಮಿನಿ ಅಂಗನವಾಡಿ ಕೇಂದ್ರಗಳು ಸೇರಿ ಒಟ್ಟು 69,899 ಅಂಗನವಾಡಿ ಕೇಂದ್ರಗಳಿವೆ. 39,50,179 ಮಕ್ಕಳು ಇಲ್ಲಿ ದಾಖಲಾಗಿ ಸೌಲಭ್ಯ ಪಡೆಯುತ್ತಿದ್ದಾರೆ. ಅಂಗನವಾಡಿ ಕೇಂದ್ರಗಳಿಗೆ ಪೂರೈಕೆ ಆಗುವ ಆಹಾರ ಪದಾರ್ಥ ಕಳಪೆ ಗುಣಮಟ್ಟ ಆಗಿರೋದು ಗಮನಕ್ಕೆ ಬಂದಿದೆ. ಕಲಬುರಗಿಯಲ್ಲಿ ಇಂತಹ ಪ್ರಕರಣ ಗಮನಕ್ಕೆ ಬಂದಿದೆ ಎಂದೂ ಅವರು ಉಲ್ಲೇಖಿಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News