ರಾಜೀನಾಮೆ, ನಿವೃತ್ತಿಯಿಂದ ತೆರವಾಗುತ್ತಿರುವ ಶಿಕ್ಷಕರು-ಪದವೀಧರರ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಗೆ ಚುನಾವಣಾ ಆಯೋಗ ಸೂಚನೆ
ಬೆಂಗಳೂರು, ಆ.11: ರಾಜೀನಾಮೆ ಮತ್ತು ನಿವೃತ್ತಿಯಿಂದ ತೆರವಾಗುತ್ತಿರುವ ವಿಧಾನಪರಿಷತ್ತಿನ ಕೆಲವು ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆ ಮಾಡುವಂತೆ ಕೇಂದ್ರ ಚುನಾವಣಾ ಆಯೋಗ ಸೂಚಿಸಿದೆ.
ನೈಋತ್ಯ ಪದವಿಧರ ಕ್ಷೇತ್ರವು ಆಯನೂರು ಮಂಜುನಾಥ್ ರಾಜೀನಾಮೆಯಿಂದ ಇದೇ ಸಾಲಿನ ಎ.19ರಿಂದ ತೆರವಾಗಿದ್ದು, ಈ ಕ್ಷೇತ್ರಕ್ಕೆ ಚುನಾವಣೆ ನಡೆದಿಲ್ಲ. ಈ ಸ್ಥಾನದ ಅವಧಿ 2024ರ ಜೂ.21ರ ವರೆಗೆ ಇದೆ. ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಪುಟ್ಟಣ್ಣ ರಾಜೀನಾಮೆಯಿಂದ 2023ರ ಮಾ.16ರಿಂದ ತೆರವಾಗಿರುವ ಕ್ಷೇತ್ರಕ್ಕೆ ಚುನಾವಣೆ ನಡೆದಿಲ್ಲ. ಈ ಸ್ಥಾನದ ಅವಧಿ 2026ರ ನ.11ರ ವರೆಗೆ ಇದೆ.
2024ರ ಜೂ.21ಕ್ಕೆ ಈಶಾನ್ಯ ಪದವೀಧರ ಕ್ಷೇತ್ರದಿಂದ ಡಾ.ಚಂದ್ರಶೇಖರ ಬಿ.ಪಾಟೀಲ್, ಬೆಂಗಳೂರು ಪದವೀಧರ ಕ್ಷೇತ್ರದಿಂದ ಎ.ದೇವೇಗೌಡ, ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಡಾ. ವೈ.ಎ.ನಾರಾಯಣ ಸ್ವಾಮಿ, ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ಎಸ್.ಎಲ್.ಭೋಜೆಗೌಡ, ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಮರಿತಿಬ್ಬೇಗೌಡ ನಿವೃತ್ತಿಯಾಗುತ್ತಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆಗೆ ಸಾರ್ವಜನಿಕ ನೋಟೀಸ್ ಅನ್ನು ಸೆ.30ರಂದು ಪ್ರಕಟನೆ ಮಾಡಬೇಕಾಗಿದೆ. ಫಾರಂ 18 ಅಥವಾ 19ರಲ್ಲಿ ಅರ್ಜಿ ಸ್ವೀಕರಿಸಲು ನವೆಂಬರ್ 6 ಕಡೆಯ ದಿನವಾಗಿದೆ. ಮತದಾರರ ಕರಡು ಪ್ರತಿ ಪ್ರಕಟಿಸುವ ದಿನ ನ.23. ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸ್ವೀಕರಿಸಲು ನ.23 ರಿಂದ ಡಿ.9ರ ವರೆಗೆ ಅವಕಾಶವಿದೆ.
ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ನಿವಾರಿಸಿ ಪೂರಕ ಪ್ರತಿಗಳನ್ನು ಸಿದ್ಧಪಡಿಸಿ ಪ್ರಕಟಿಸಲು ಡಿ.25 ಹಾಗೂ ಮತದಾರರ ಅಂತಿಮ ಪಟ್ಟಿ ಪ್ರಕಟಿಸುವ ದಿನಾಂಕ ಡಿ.30 ಆಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಚುನಾವಣಾ ಆಯೋಗದ ಸಮಗ್ರ ನಿರ್ದೇಶಗಳ ಅನ್ವಯ ಮಾಡತಕ್ಕದ್ದು ಎಂದು ಸೂಚಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.