ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದಿಂದ ʼINDIAʼ ಒಕ್ಕೂಟಕ್ಕೆ ತೀವ್ರ ಆಘಾತವಾಗಿದೆ: ಬಿ.ವೈ. ವಿಜಯೇಂದ್ರ

Update: 2024-01-08 07:01 GMT

ಬೆಂಗಳೂರು: ದೇಶ ಮತ್ತು ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಇಂದು ವಿಶ್ಲೇಷಿಸಿದರು.

ನಗರದ ಬೆಂಗಳೂರಿನ ಹೋಟೆಲ್ ನಲ್ಲಿ ಇಂದು ನಡೆದ ಬಿಜೆಪಿ ಲೋಕಸಭಾ ಚುನಾವಣಾ ಯೋಜನಾ ಸಭೆಯಲ್ಲಿ ಅವರು ಮಾತನಾಡಿದರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯ ಸರಕಾರಕ್ಕೆ ತಕ್ಕ ಪಾಠ ಕಲಿಸಲು ರಾಜ್ಯದ ಮತದಾರರು ಸಜ್ಜಾಗಿದ್ದಾರೆ. ಬಿಜೆಪಿ, ಸಂಘಟನೆಗೆ, ಪೂರಕ ಕ್ರಮಗಳನ್ನು ಪಕ್ಷ ಕೈಗೊಳ್ಳಲಿದೆ ಎಂದು ಪ್ರಕಟಿಸಿದರು. ಪಕ್ಷವು ರಾಜ್ಯದಲ್ಲಿ ಎಲ್ಲ 28 ಸ್ಥಾನಗಳನ್ನೂ ಗೆಲ್ಲಲಿದೆ. ಇದಕ್ಕಾಗಿ ಎಲ್ಲರೂ ಶ್ರಮಿಸುವುದಾಗಿ ತಿಳಿಸಿದರು.

ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಡದಲ್ಲಿ ಬಿಜೆಪಿ ಗೆದ್ದಿದೆ. ಐಎನ್‍ಡಿಐಎ (ಇಂಡಿಯಾ) ಒಕ್ಕೂಟ, ಕಾಂಗ್ರೆಸ್‍ಗೆ ಆಘಾತವಾಗಿತ್ತು ಎಂದು ವಿವರಿಸಿದರು. ಇದೊಂದು ಸ್ಪಷ್ಟ ಸಂದೇಶವಾಗಿದೆ ಎಂದರು.

ದೇಶ- ರಾಜ್ಯದ ಜನರು, ಪ್ರಜ್ಞಾವಂತ ಮತದಾರರು ಕಾಂಗ್ರೆಸ್ ಪಕ್ಷದ ಗಿಮಿಕ್ ಗ್ಯಾರಂಟಿಯನ್ನು ನಂಬಲು ತಯಾರಿಲ್ಲ. ಇದರಿಂದ ಮೋದಿ ಗ್ಯಾರಂಟಿಯೇ ಶ್ರೇಷ್ಠ ಎಂದು ಪ್ರಜ್ಞಾವಂತ ಮತದಾರರು ತಿಳಿದಿದ್ದಾರೆ ಎಂದು ನುಡಿದರು. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಬಹುಮತ ಸಾಧಿಸಿ ಮೋದಿಜೀ ಮೂರನೇ ಬಾರಿ ಪ್ರಧಾನಮಂತ್ರಿ ಆಗಲಿದ್ದು, ಅವರ ನೇತೃತ್ವದಲ್ಲಿ ದೇಶ ಅಭಿವೃದ್ಧಿ ಪಥದಲ್ಲಿ ಸಾಗಲಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಸರಕಾರದ ಅಸಮರ್ಥ, ಅಸಮರ್ಪಕ ಆಡಳಿತದಿಂದ ಹಣಕಾಸು ವ್ಯವಸ್ಥೆ ಹದಗೆಟ್ಟಿದೆ. ಕಾನೂನು- ಸುವ್ಯವಸ್ಥೆ ಕಾಪಾಡುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. 14 ಬಜೆಟ್ ಮಂಡಿಸಿದ ಅನುಭವಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂಪನ್ಮೂಲ ಕ್ರೋಡೀಕರಣದ ವಿಚಾರದಲ್ಲಿ ಪೂರ್ಣಪ್ರಮಾಣದಲ್ಲಿ ವಿಫಲವಾಗಿದ್ದಾರೆ. ಇದರಿಂದ ಭೀಕರ ಬರಗಾಲ, 500 ರೈತರ ಆತ್ಮಹತ್ಯೆ ಹೊರತಾಗಿಯೂ ರಾಜ್ಯ ಸರಕಾರವು ಪರಿಹಾರ ಕೊಡದೆ, ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.

ಈ ಸಂದರ್ಭದಲ್ಲಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.

ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಸಂಸದ ಡಿ.ವಿ. ಸದಾನಂದಗೌಡ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮತು ಮುಖಂಡರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News