ವಿದ್ಯುತ್ ತಂತಿ ತಗುಲಿ ತಾಯಿ,ಮಗು ಮೃತಪಟ್ಟ ಪ್ರಕರಣ; ನಾಲ್ಕು ಮಾದರಿಯಲ್ಲಿ ತನಿಖೆ ನಡೆಸಲಾಗುತ್ತಿದೆ: ಸಚಿವ ಜಾರ್ಜ್
ಬೆಂಗಳೂರು: ಕಾಡುಗೋಡಿಯಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ತಗುಲಿ ತಾಯಿ, ಮಗು ಮೃತಪಟ್ಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ನಾಲ್ಕು ಮಾದರಿಯಲ್ಲಿ ತನಿಖೆ ನಡೆಸಲಾಗುತ್ತಿದೆ. ವರದಿಯ ಬಳಿಕ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಮಂಗಳವಾರ ನಗರದ ಬೆಸ್ಕಾಂ ಕಾರ್ಪೊರೇಟ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಘಟನೆಗೆ ಸಂಬಂಧಿಸಿದಂತೆ ಬೆಸ್ಕಾಂ, ಪೊಲೀಸ್, ಇಂಧನ ಇಲಾಖೆ ಹಾಗೂ ಸ್ವತಂತ್ರ ಮಾದರಿಯ ತನಿಖೆಗಳು ನಡೆಯುತ್ತಿವೆ. ಈಗಾಗಲೇ ಸಂಬಂಧಪಟ್ಟ ಐವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಹಾಗೂ ಮೃತರ ಕುಟುಂಬಕ್ಕೆ ಹತ್ತು ಲಕ್ಷ ರೂ. ಪರಿಹಾರವನ್ನು ಘೋಷಿಸಲಾಗಿದೆ ಎಂದರು.
ರಾಜ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಗಂಭೀರವಾಗಿ ಪರಿಗಣಿಸಿದ್ದೇವೆ. ಬೆಸ್ಕಾಂ ಅಧಿಕಾರಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲು ನಾವು ಯಾವುದೇ ಅಡ್ಡಿ ಪಡಿಸಿಲ್ಲ. ತನಿಖಾ ವರದಿ ನೀಡಲು ಸಮಿತಿಗಳಿಗೆ ಕಾಲಮಿತಿ ನಿಗದಿ ಪಡಿಸಲಾಗಿದೆ ಎಂದು ಅವರು ಹೇಳಿದರು.
ವಿದ್ಯುತ್ ತಂತಿ ಕಡಿತಗೊಂಡಿರುವುದನ್ನು ನೋಡಿಕೊಳ್ಳದೆ ಇರುವುದು ಲೋಪವಾಗಿದೆ. ಇದನ್ನು ತಾಂತ್ರಿಕ ಸಮಸ್ಯೆ ಎಂದು ಪರಿಗಣಿಸಲಾಗಿದೆ. ಒಂದು ಕಡೆ ವಿದ್ಯುತ್ ತಂತಿಗಳ ಸಮಸ್ಯೆಯಾದರೆ ಮತ್ತೊಂದು ಆಫ್ಟಿಕಲ್ ಫೈಬರ್ ಕೇಬಲ್ ಗಳ ಸಮಸ್ಯೆಯಿದೆ. ಏಕಾಏಕಿ ಎಲ್ಲವನ್ನೂ ಒಮ್ಮಲೆ ಕಿತ್ತು ಹಾಕಲು ಆಗುವುದಿಲ್ಲ. ಅದಕ್ಕಾಗಿ ಆಫ್ಟಿಕಲ್ ಕೇಬಲ್ ಳನ್ನು ಭೂಮಿ ಒಳಗಿನ ಮಾರ್ಗಗಳಲ್ಲಿ ಅಳವಡಿಸಲು ಹದಿನೈದು ದಿನಗಳ ಕಾಲಾವಕಾಶ ನೀಡಲಾಗುತ್ತಿದೆ ಎಂದು ಕೆ.ಜೆ.ಜಾರ್ಜ್ ಸೂಚಿಸಿದರು.
ನಿಗದಿತ ಕಾಲಾವಧಿಯಲ್ಲಿ ನೆಲ ಮಾರ್ಗದಲ್ಲಿ ಆಫ್ಟಿಕಲ್ ಕೇಬಲ್ ಳನ್ನು ಅಳವಡಿಸದಿದ್ದರೆ ವಿದ್ಯುತ್ ತಂತಿ ಕಂಬಿಯ ಮೇಲಿರುವ ಎಲ್ಲಾ ಆಫ್ಟಿಕಲ್ ಕೇಬಲ್ ಳನ್ನು ಕಡಿತ ಮಾಡಲಾಗುವುದು ಎಂದು ಕೆ.ಜೆ.ಜಾರ್ಜ್ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಇಂಧನ ಇಲಾಖೆ ಅಪರ ಕಾರ್ಯದರ್ಶಿ ಗೌರವ್ ಗುಪ್ತಾ, ಕೆಪಿಟಿಸಿಎಲ್ ಎಂ.ಡಿ.ಪಂಕಜ್ ಕುಮಾರ್ ಪಾಂಡೆ ಉಪಸ್ಥಿತರಿದ್ದರು.
ಘಟನೆಗೆ ಕಾರಣ ಇಲಿ, ಹೆಗ್ಗಣಗಳ ಕಾಟ !
ಘಟನಾ ಸ್ಥಳದ ಪಕ್ಕದಲ್ಲಿ ಇದ್ದ ಔದುಂಬರ ಅಪಾರ್ಟ್ಮೆಂಟ್ ಉಪಕೇಂದ್ರದ ಟ್ರಾನ್ಸ್ ಫಾರ್ಮರ್ ಗಳಲ್ಲಿ, ಹೆಗ್ಗಣಗಳು ಓಡಾಡಿದ ಪರಿಣಾಮ ಟ್ರಿಪ್ ಆಗಿ ಕೇಬಲ್ ಕಟ್ ಆಗಿದೆ. ಕಾಡುಗೋಡಿ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಆದರೆ ಆ ಸಮಯದಲ್ಲಿ ಸಮಸ್ಯೆ ಕಂಡು ಬಂದಿಲ್ಲ. ನ.19ರ ಬೆಳಗ್ಗೆ ಕೇಬಲ್ ನಲ್ಲಿ ವಿದ್ಯುತ್ ಹರಿಯುತ್ತಿತ್ತು. ಆದರೆ ಯಾರೂ ಮಾಹಿತಿಯನ್ನು ಬೆಸ್ಕಾಂಗೆ ತಿಳಿಸಿಲ್ಲ. ಪರಿಣಾಮ ಈ ಘಟನೆ ಜರುಗಿದೆ ಎಂದು ಬೆಸ್ಕಾಂನ ಚೀಫ್ ಎಲೆಕ್ಟ್ರಿಕಲ್ ಇಂಜಿನಿಯರ್ ಅಪ್ಪಚ್ಚು ತಿಳಿಸಿದರು.