'ವಿದ್ಯುತ್ ಕಳ್ಳ ಕುಮಾರಸ್ವಾಮಿ' ಪೋಸ್ಟರ್ ಪ್ರಕರಣ: ಮೂವರ ವಿರುದ್ಧ ಎಫ್‌ಐಆರ್
ಬೆಂಗಳೂರು: ನಗರದ ಜೆಡಿಎಸ್ ಕಚೇರಿ ಕಂಪೌಂಡ್ ಮೇಲೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಅವಹೇಳನಕಾರಿ ಪೋಸ್ಟರ್ ಅಂಟಿಸಿರುವ ಆರೋಪದಲ್ಲಿ ಮೂವರ ವಿರುದ್ಧ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
‘ನವೆಂಬರ್ 14ರಂದು ರಾತ್ರಿ 10 ಗಂಟೆ ಸುಮಾರಿಗೆ ಕಿಡಿಗೇಡಿಗಳು 'ವಿದ್ಯುತ್ ಕಳ್ಳ ಕುಮಾರಸ್ವಾಮಿ' ಎಂದು ಬರೆದಿರುವ ಪೋಸ್ಟರ್ ಗಳನ್ನು ಶೇಷಾದ್ರಿಪುರದ ಜೆ.ಪಿ. ಭವನ (ಜೆಡಿಎಸ್ ಕಚೇರಿ) ಕಂಪೌಂಡ್ ಮೇಲೆ ಅಂಟಿಸಿ ಪರಾರಿಯಾಗಿದ್ದಾರೆ' ಎಂದು ಆರೋಪಿಸಿ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್‌ಗೌಡ ಅವರು ಶ್ರೀರಾಂಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಈ ದೂರಿನ ಮೇರೆಗೆ ಬಿಂದು, ನವೀನ್‌ಗೌಡ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕುಮಾರಸ್ವಾಮಿ ಅವರ ಭಾವಚಿತ್ರವುಳ್ಳ ಪೋಸ್ಟರ್‌ನಲ್ಲಿ ‘ವಿದ್ಯುತ್ ಕಳ್ಳ ಕುಮಾರಸ್ವಾಮಿ’ ಎಂದು ಬರೆಯಲಾಗಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ್ದ ಪೊಲೀಸರು ನವೆಂಬರ್ 14ರಂದು ರಾತ್ರಿಯೇ ಪೋಸ್ಟರ್ ತೆರವುಗೊಳಿಸಿದ್ದರು.