ಚಲಿಸುತ್ತಿದ್ದ ಕಾರಿನ ಮೇಲೆ ಕಾಡಾನೆ ದಾಳಿ; ದಂಪತಿ ಸ್ವಲ್ಪದರಲ್ಲೇ ಅಪಾಯದಿಂದ ಪಾರು
ಸುಂಟಿಕೊಪ್ಪ, ಜೂ.23: ಹಾಡಹಗಲಿನಲ್ಲಿ ರಾಜ್ಯ ಹೆದ್ದಾರಿಯಲ್ಲಿ ಕಾಡಾನೆಯೊಂದು ಚಲಿಸುತ್ತಿದ್ದ ಕಾರಿನ ಮೇಲೆ ದಾಳಿ ನಡೆಸಿದೆ ಅದೃಷ್ಟವಶತ್ ಯಾವುದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪತಿ ಪತ್ನಿ ಪಾರಾಗಿರುವ ಬಗ್ಗೆ ವರದಿಯಾಗಿದೆ.
ಸುಂಟಿಕೊಪ್ಪದಿಂದ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಮತ್ತಿಕಾಡುವಿನ ಕಾಫಿಬೆಳೆಗಾರರಾದ ಕೋರನ ಟಿಪ್ಪು ಎಂಬುವವರು ಬೆಂಜ್ಸ್ ಕಾರಿನಲ್ಲಿ ಪತ್ನಿಯೊಂದಿಗೆ ಮನೆಗೆ ತೆರಳುತ್ತಿದ್ದಾಗ ಕುಟ್ಟೇಟಿ ತೋಟದ ಲೈನ್ ಮನೆಯ ಸಮೀಪ ಕಾಡಾನೆಯೊಂದು ಅಡ್ಡಗಟ್ಟಿದೆ. ಅಪಾಯದ ಸುಳಿವು ಮನಗಂಡ ಭೀತಿಯಿಂದ ಟಿಪ್ಪು ಮತ್ತು ಅವರ ಪತ್ನಿ ಕಾರಿನಿಂದ ಇಳಿದು ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾರೆ.
ಉದ್ರೇಕಗೊಂಡಿದ್ದ ಸಲಗ ದಂತದಿಂದ ಕಾರಿನ ಮುಂಭಾಗದ ಬಾನೆಟ್‍ಗೆ ದಂತದಿಂದ ಗುದ್ದಿ ಹಾನಿಗೊಳಿಸಿ, ಅಲ್ಲಿಂದ ಕಾಲ್ಕಿತ್ತಿದೆ. ಇದರಿಂದ ಕಾರು ಜಖಂಗೊಂಡಿದ್ದು ಸಾವಿರಾರು ರೂ ನಷ್ಟವುಂಟಾಗಿದೆ ಎಂದು ಟಿಪ್ಪು ನೋವನ್ನು ತೋಡಿಕೊಂಡಿದ್ದಾರೆ.
ಮತ್ತಿಕಾಡು ವ್ಯಾಪ್ತಿಯ ತೋಟಗಳಲ್ಲಿ ಶನಿವಾರ ಬೆಳಗ್ಗೆಯಿಂದ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಚರಣೆಯನ್ನು ನಡೆಸಲಾಗುತ್ತಿದ್ದು ಇದರಿಂದ ಕೋಪಕ್ಕೀಡಾಗಿ ಓಡಿ ಬಂದ ಸಲಗ ಮುಂಭಾಗದಲ್ಲಿ ಸಿಕ್ಕಿದ ಕಾರಿನ ಮೇಲೆ ದಾಳಿ ನಡೆಸಿದೆ.