ಎರಡು ವರ್ಷದೊಳಗೆ ಎತ್ತಿನಹೊಳೆ ಯೋಜನೆ ಪೂರ್ಣ: ಗೃಹ ಸಚಿವ ಜಿ.ಪರಮೇಶ್ವರ್

Update: 2023-12-18 09:48 GMT

ಬೆಂಗಳೂರು: ಎತ್ತಿನ ಹೊಳೆ ಯೋಜನೆಗೆ ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಬಿಜೆಪಿ ಸರ್ಕಾರವು ಅನುದಾನ ನೀಡಿಲ್ಲ. ಹೀಗಾಗಿ ಸ್ಥಗಿತಗೊಂಡಿದ್ದ ಯೋಜನೆಯ ಕೆಲಸವನ್ನು ನಮ್ಮ ಸರ್ಕಾರ ಆರಂಭಿಸಿದೆ ಎಂದು ಗೃಹ ಸಚಿವ ಡಾ.‌ಜಿ.ಪರಮೇಶ್ವರ್ ಅವರು ಹೇಳಿದರು.

ಇಂದು ಬೆಳಗ್ಗೆ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಎತ್ತಿನ ಹೊಳೆ ಯೋಜನೆ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎತ್ತಿನ ಹೊಳೆ ಯೋಜನೆಯ ಪ್ರಾರಂಭದಲ್ಲಿ ಅಂದಾಜು ವೆಚ್ಚ 13,500 ಸಾವಿರ ಕೋಟಿ ರೂ. ನಿಗಧಿಗೊಳಿಸಲಾಗಿತ್ತು. ಈ ಹಿಂದಿನ ಅವಧಿಯಲ್ಲಿ ಬಿಜೆಪಿ ಸರ್ಕಾರವು ಅನುಧಾನವನ್ನು ನೀಡದ ಪರಣಾಮ ಕಾಮಗಾರಿ ಸ್ಥಗಿತಗೊಂಡಿತ್ತು ಎಂದು ಹೇಳಿದರು.

ʼಈಗ ನಮ್ಮ ಸರ್ಕಾರವು ಅನುದಾನ ಬಿಡಗುಡೆ ಮಾಡಿದೆ. ಯೋಜನೆಯ ಅಂದಾಜು ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಪ್ರಸ್ತುತ 22 ಸಾವಿರ ಕೋಟಿ ರೂ. ಆಗಿದೆ ಎಂದರು. ಇನ್ನೂ ಎರಡು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಿ ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲಾಗುವುದು ಎಂದು ತಿಳಿಸಿದರು.

ವಾಟರ್ ಸ್ಟೋರೆಜ್‌ಗಾಗಿ ಕೊರಟಗೆರೆ ರೈತರು ನೀಡಿರುವ ಭೂಮಿಗೆ ಎಕರೆಗೆ 8 ಲಕ್ಷ ರೂ. ಹಾಗೂ ದೊಡ್ಡಬಳ್ಳಾಪುರದಲ್ಲಿ ಎಕರೆ ಭೂಮಿಗೆ 32 ಲಕ್ಷ ರೂ. ಪರಿಹಾರ ನಿಗಧಿಪಡಿಸಲಾಗಿದೆ. ಎಲ್ಲ ರೈತರಿಗೂ ಒಂದೇ ರೀತಿಯ ಸಮಾನ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಲಾಗಿದೆ ಎಂದರು.

ಎನ್‌ಐಎ ದಾಳಿ: ಎನ್‌ಐಎ ಕಚೇರಿ ಬೆಂಗಳೂರಿನಲ್ಲಿ ಆಗಿದೆ. ಅಕ್ರಮ ಚಟುವಟಿಕೆಗಳ‌ ಬಗ್ಗೆ ಮಾಹಿತಿ ಆಧರಿಸಿ ದಾಳಿ ಮಾಡುತ್ತಿರುತ್ತಾರೆ. ಈ ಬಗ್ಗೆ ಎನ್‌ಐಎ ತಂಡವು ಕೆಲವು ಸಲ ರಾಜ್ಯ ಪೊಲೀಸರೊಂದಿಗೆ ಮಾಹಿತಿ ಹಂಚಿಕೊಳ್ಳುತ್ತಾರೆ. ಅವರ ಕರ್ತವ್ಯ ಅವರು ಮಾಡಲಿದ್ದಾರೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News