ಸೋತ ನಂತರವೂ ಬಿಜೆಪಿ ಉಡುಗೆ ತೊಡುಗೆಗಳ ಹಿಂದೆ ಬಿದ್ದಿದೆ: ಸಚಿವ ಮಧು ಬಂಗಾರಪ್ಪ ವ್ಯಂಗ್ಯ
ಬೆಂಗಳೂರು: ಸೋತ ನಂತರವೂ ಬಿಜೆಪಿ ನಾಯಕರು ಉಡುಗೆ ತೊಡುಗೆಗಳ ಹಿಂದೆ ಬಿದ್ದಿದ್ದಾರೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ವ್ಯಂಗ್ಯವಾಡಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಹಿಜಾಬ್ ನಿಷೇಧ ಹೇರಿದ್ದ ಬಿಜೆಪಿಯನ್ನು ಜನ ಸೋಲಿಸಿದ್ದಾರೆ. ನಮ್ಮನ್ನು ಗೆಲ್ಲಿಸಿದ್ದಾರೆ. ಈಗ ಮತ್ತೆ ಹಿಜಾಬ್ ಹಿಂದೆ ಬಿದ್ದಿದ್ದಾರೆ ಎಂದು ಹೇಳಿದರು.
ಹಿಜಾಬ್ ವಿಚಾರದಲ್ಲಿ ಎಲ್ಲರಿಗೂ ಸ್ವಾತಂತ್ರ್ಯ ಸಿಗುವಂತೆ, ಯಾರಿಗೂ ತೊಂದರೆಯಾಗದಂತೆ ಕಾನೂನಿನ ಇತಿಮಿತಿಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು.ಇನ್ನೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲ ರೀತಿಯ ಆಲೋಚನೆಗಳನ್ನು ಮಾಡಿಯೇ ಹೇಳಿಕೆ ನೀಡಿರುತ್ತಾರೆ. ನಾನು ಅವರೊಂದಿಗೆ ಈ ಸಂಬಂಧ ಚರ್ಚೆ ಮಾಡುತ್ತೇನೆ ಎಂದು ಅವರು ತಿಳಿಸಿದರು.
ನಾನು ಪಂಚೆ ಹಾಕುತ್ತೇನೆ. ಉಡುಗೆ-ತೊಡುಗೆಗಳು ಭಿನ್ನವಾಗಿರುತ್ತವೆ. ಆಹಾರ ಪದ್ಧತಿಯಲ್ಲೂ ಅದೇ ರೀತಿಯ ವಿಭಿನ್ನತೆ ಇರುತ್ತವೆ. ಅದು ಅವರ ಸ್ವಾತಂತ್ರ್ಯ. ಅದಕ್ಕೆ ಯಾರೂ ಅಡ್ಡಿಪಡಿಸಬಾರದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ ಎಂದ ಅವರು, ಈ ಹಿಂದೆ ಬಿಜೆಪಿ ಸರಕಾರ ತೆಗೆದುಕೊಂಡಿದ್ದಂತಹ ನಿರ್ಧಾರ ನ್ಯಾಯಾಲಯದಲ್ಲಿ ಚರ್ಚೆಗೊಳಗಾಗಿತ್ತು ಎಂದು ಹೇಳಿದರು.
ರಾಜ್ಯದಲ್ಲಿ ಬರ ಪರಿಸ್ಥಿತಿ ಗಂಭೀರವಾಗಿದೆ. ಅದನ್ನು ಬಿಜೆಪಿಯವರು ತಾಲೂಕು ಮತ್ತು ಜಿಲ್ಲಾ ಮಟ್ಟಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದರು. ಆ ವರದಿಯನ್ನು ಯಾರಿಗೆ ನೀಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ 6 ತಿಂಗಳ ಬಳಿಕ ಮುಖ್ಯಮಂತ್ರಿ ಭೇಟಿಗೆ ಸಮಯ ನೀಡಿದ್ದಾರೆ. ಕೇಂದ್ರದಿಂದ ಬರಬೇಕಾದ ಪಾಲು ನಮಗೆ ಈವರೆಗೂ ಬಿಡುಗಡೆಯಾಗಿಲ್ಲ. ಅದನ್ನೆಲ್ಲಾ ಮರೆತು ಬಿಜೆಪಿಯವರು ಉಡುಗೆ ತೊಡುಗೆಗಳ ಹಿಂದೆ ಬಿದ್ದಿದ್ದಾರೆ ಎಂದು ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು.
ಶಾಂತಿಯ ತೋಟಕ್ಕೆ ರಾಜ್ಯದ ಜನ ಮತ ಹಾಕಿದ್ದಾರೆ. ದೇಶದಲ್ಲಿ ಕೋಮು ವಿಷಬೀಜ ಬಿತ್ತಿದ್ದು ಬಿಜೆಪಿಯನ್ನು ಸೋಲಿಸಿ ವಿಷಬೀಜವನ್ನು ಕಿತ್ತೆಸೆಯುತ್ತಿದ್ದಾರೆ.
-ಮಧು ಬಂಗಾರಪ್ಪ, ಶಿಕ್ಷಣ ಸಚಿವ