"58 ಎಕರೆ ಪ್ರದೇಶ ಮಂಜೂರಾಗಿದ್ದರೂ ಒಂದೇ ಒಂದು ಉದ್ಯೋಗವನ್ನೂ ಸೃಷ್ಟಿಸಿಲ್ಲ": ಕರ್ನಾಟಕ ವಿಧಾನಸಭೆಯಲ್ಲಿ ಇನ್ಫೋಸಿಸ್ ಮೇಲೆ ಕಿಡಿ

Update: 2024-02-14 08:37 GMT

ಅರವಿಂದ್ ಬೆಲ್ಲದ್

ಬೆಂಗಳೂರು: ಮಾಹಿತಿ ತಂತ್ರಜ್ಞಾನ ದೈತ್ಯ ಸಂಸ್ಥೆ ಇನ್ಪೋಸಿಸ್ ತನಗೆ ಹುಬ್ಬಳ್ಳಿಯಲ್ಲಿ ಮಂಜೂರಾಗಿರುವ 58 ಎಕರೆ ಪ್ರದೇಶದಲ್ಲಿ ಒಂದೇ ಒಂದು ಉದ್ಯೋಗ ಸೃಷ್ಟಿಸದಿರುವುದರಿಂದ ಅದಕ್ಕೆ ಮಂಜೂರು ಮಾಡಿರುವ ಭೂಮಿಯನ್ನು ಹಿಂಪಡೆಯಬೇಕು ಎಂದು ವಿರೋಧ ಪಕ್ಷದ ಉಪ ನಾಯಕ ಅರವಿಂದ್ ಬೆಲ್ಲದ್ ರಾಜ್ಯ ಸರಕಾರವನ್ನು ಆಗ್ರಹಿಸಿದರು. ಇದಕ್ಕೆ ಪ್ರತಿಯಾಗಿ ಭಾರಿ ಕೈಗಾರಿಕೆಗಳ ಸಚಿವ ಎಂ.ಬಿ.ಪಾಟೀಲ್ ಕ್ರಮ ಕೈಗೊಳ್ಳುವ ಭರವಸೆ ನೀಡಿದರು ಎಂದು deccanherald.com ವರದಿ ಮಾಡಿದೆ.

ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಅವರು ಕೈಗಾರಿಕಾ ಸಂಸ್ಥೆಗಳಲ್ಲಿ ಸ್ಥಳೀಯರಿಗೆ ಉದ್ಯೋಗವಾಶ ಒದಗಿಸಬೇಕು ಎಂದು ಮಂಡಿಸಿದ್ದ ಗಮನ ಸೆಳೆಯುವ ಗೊತ್ತುವಳಿಯ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಹುಬ್ಬಳ್ಳಿ-ಧಾರವಾಡ (ಪಶ್ಚಿಮ) ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್, ಮೇಲಿನಂತೆ ಆಗ್ರಹಿಸಿದರು.

"ಎಕರೆಗೆ ರೂ. 1.5 ಕೋಟಿ ಮೌಲ್ಯ ಹೊಂದಿರುವ ಭೂಮಿಯನ್ನು ಇನ್ಫೋಸಿಸ್ ಕೇವಲ ರೂ. 35 ಲಕ್ಷಕ್ಕೆ ಪಡೆಯಿತು. ನಿಮ್ಮ ಮಕ್ಕಳು ಉದ್ಯೋಗ ಪಡೆಯುವುದರಿಂದ ನಿಮ್ಮ ಭೂಮಿಯನ್ನು ಮಾರಾಟ ಮಾಡಿ ಎಂದು ನಾನು ರೈತರಲ್ಲಿ ಮನವಿ ಮಾಡಿದ್ದೆ. ನಾನಿಂದು ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡಲಾಗುತ್ತಿಲ್ಲ. ನ್ಯಾಯಾಲಯಗಳಲ್ಲಿನ ದಾವೆಗಳನ್ನು ಹಿಂಪಡೆಯುವಂತೆಯೂ ನಾನು ಅವರ ಮನವೊಲಿಸಿದ್ದೆ. ಇದರ ವಿರುದ್ಧ ದಂಡವನ್ನೂ ವಿಧಿಸಬೇಕು" ಎಂದು ಬಿಜೆಪಿ ಶಾಸಕರೂ ಆದ ಅರವಿಂದ್ ಬೆಲ್ಲದ್ ಆಗ್ರಹಿಸಿದರು. ಇದರೊಂದಿಗೆ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ನಿರ್ವಹಿಸುತ್ತಿರುವ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ದೊರೆಯುತ್ತಿಲ್ಲ ಎಂದೂ ಅವರು ದೂರಿದರು.

1,500 ಮಾಹಿತಿ ತಂತ್ರಜ್ಞರಿಗೆ ಉದ್ಯೋಗಾವಕಾಶ ಒದಗಿಸುವ ಸಾಮರ್ಥ್ಯ ಹೊಂದಿರುವ ಹುಬ್ಬಳ್ಳಿಯ ಇನ್ಫೋಸಿಸ್ ಕ್ಯಾಂಪಸ್‌ಗೆ 2013ರಲ್ಲಿ ಅನುಮೋದನೆ ನೀಡಲಾಗಿತ್ತು. ಈ ಕ್ಯಾಂಪಸ್ ಅನ್ನು ಅಂದಾಜು ರೂ. 350 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News