ಕೌಟುಂಬಿಕ ಕಲಹ ಹಿನ್ನೆಲೆ: ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ; ಬಾಲಕಿ ಮೃತ್ಯು

Update: 2023-07-13 06:37 GMT

ಚಾಮರಾಜನಗರ: ಗೃಹಿಣಿಯೊಬ್ಬರು ಕೌಟುಂಬಿಕ ಕಲಹದ ಹಿನ್ನೆಲೆ ತನ್ನಿಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಈ ಪೈಕಿ 8 ವರ್ಷದ ಬಾಲಕಿ ಮೃತ ಪಟ್ಟಿರುವ ಘಟನೆ ಕೊಳ್ಳೇಗಾಲ ತಾಲ್ಲೂಕಿನ ಮಧುವನಹಳ್ಳಿ ಗ್ರಾಮದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಮಧುವನಹಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಬೋಳಿ ಸಿದ್ದಯ್ಯನ ಹಟ್ಟಿ ಬೀದಿ ನಿವಾಸಿ ಮಹೇಶ್ ಎಂಬುವರ ಪುತ್ರಿ ಸಿಂಧು(8) ಮೃತ ಬಾಲಕಿ. ಈಕೆಯ ತಾಯಿ ಶೀಲಾ(25), ಸಹೋದರ ಯಶವಂತ್ (12) ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ಕುಡಿತಕ್ಕೆ ಹಣ ನೀಡುವಂತೆ ಪತಿ ಮಹೇಶ್, ಪತ್ನಿಯನ್ನು ಒತ್ತಾಯಿಸಿ ಗಲಾಟೆ ಮಾಡಿದ್ದಾನೆ. ಇದರಿಂದ ಬೇಸತ್ತ ಶೀಲಾ ಮನೆಯಲ್ಲಿ ಯಾರೂ ಇಲ್ಲದ ವೇಳೆ ತನ್ನಿಬ್ಬರು ಮಕ್ಕಳಿಗೆ ವಿಷ ಉಣಿಸಿ ತಾನೂ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎನ್ನಲಾಗಿದೆ. ಇದಾದ ಸ್ವಲ್ಪ ಹೊತ್ತಿಗೆ ಮನೆಯಲ್ಲಿ ಮೂವರು ಹೊಟ್ಟೆ ನೋವು ತಾಳಲಾರದೆ ಚೀರಾಡುತ್ತಿದ್ದುದ್ದನ್ನು ಗಮನಿಸಿದ ನೆರೆಯವರು, ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ಕೊಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ವೇಳೆ ಚಿಕಿತ್ಸೆಗೆ ಸ್ಪಂದಿಸದ ಬಾಲಕಿ ಸಿಂಧು ಮೃತಪಟ್ಟಿದ್ದು, ಉಳಿದ ಇಬ್ಬರನ್ನು ಮೈಸೂರಿನ ಕಾವೇರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News