ರೈತರ ಬರ ಪರಿಹಾರ ಬ್ಯಾಂಕ್ ವಜಾ ಮಾಡುವಂತಿಲ್ಲ: ಸಿಎಂ ಸಿದ್ದರಾಮಯ್ಯ

Update: 2024-05-23 14:34 GMT

ಬೆಂಗಳೂರು: ರೈತರಿಗೆ ನೀಡುತ್ತಿರುವ ಬರ ಪರಿಹಾರ ಮೊತ್ತ ಯಾವುದೇ ಕಾರಣಕ್ಕೂ ಸಾಲಕ್ಕೆ ವಜಾ ಮಾಡಿಕೊಳ್ಳದಂತೆ ಬ್ಯಾಂಕ್‍ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮುಂಗಾರು ಹಿನ್ನೆಲೆಯಲ್ಲಿ ಬರ ಪರಿಸ್ಥಿತಿ ನಿವಾರಣೆ ಕ್ರಮಗಳ ಬಗ್ಗೆ ಗುರುವಾರ ಗೃಹ ಕಚೇರಿ ಕೃಷ್ಣಾದಲ್ಲಿ ಪರಾಮರ್ಶೆ ಮಾಡಲು ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಧಿಕಾರಿಗಳು ಮತ್ತು ಸಿಇಒಗಳ ಜತೆಗಿನ ವಿಡಿಯೊ ಸಂವಾದ ಬಳಿಕ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಸಕಾಲದಲ್ಲಿ ರೈತರಿಗೆ ಸಾಲ ಸಿಗುವುದನ್ನು ಖಾತರಿಪಡಿಸಬೇಕು. ಈ ವರ್ಷದ ಸಾಲ ಯೋಜನೆ ಕಳುಹಿಸಲಾಗಿದೆ. ಜಿಲ್ಲಾ ಬ್ಯಾಂಕ್‍ಗಳೊಂದಿಗೆ ಸಮನ್ವಯ ವಹಿಸಿ, ಕ್ರಮ ಕೈಗೊಳ್ಳಬೇಕು.ಅದೇ ರೀತಿ, ಬರ ಪರಿಹಾರ ಮೊತ್ತವನ್ನು ರೈತರ ಸಾಲಕ್ಕೆ ವಜಾ ಮಾಡಿಕೊಳ್ಳದಂತೆ ಬ್ಯಾಂಕ್‍ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

ಬೆಳೆ ವಿಮೆ ಕ್ಲೇಮ್ ಮಾಡುವ ಸಂದರ್ಭದಲ್ಲಿ ಕಂಪೆನಿಗಳ ಸ್ಯಾಂಪಲ್ ಪರಿಶೀಲನೆಯ ಕುರಿತು ರೈತರು ಹಲವು ಸಂದೇಹಗಳನ್ನು ಹೊಂದಿದ್ದಾರೆ. ಕಂಪೆನಿಗಳು ಆಡುವ ಆಟದಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುವ ಅಪಾಯವಿದೆ ಎನ್ನುವ ಸಲಹೆ ಸಚಿವ ಸಂತೋಷ್ ಲಾಡ್ ಅವರಿಂದ ಬಂದಿದ್ದು, ಅದರಂತೆ ಮುಂಚಿತವಾಗಿಯೇ ವಿಮಾ ಕಂಪೆನಿಗಳೊಂದಿಗೆ ಚರ್ಚಿಸಿ, ರೈತರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬರ ಪರಿಹಾರ ಕಾಮಗಾರಿಗಳು ಮತ್ತು ಇತರ ಕಾರ್ಯಗಳ ಬಿಲ್‍ಗಳ ಪಾವತಿಯನ್ನು ಪ್ರತಿ 15 ದಿನಕ್ಕೊಮ್ಮೆ ಮಾಡುವಂತೆ ಸೂಚಿಸಲಾಗಿದೆ ಎಂದ ಅವರು, ಮುಂದಿನ ಒಂದು ವಾರದೊಳಗೆ ಇನ್‍ಪುಟ್ ಸಬ್ಸಿಡಿ ಶೇ. 100 ರಷ್ಟು ಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿದೆ. ಹಾಗೇ, ಜೀವನೋಪಾಯ ನಷ್ಟ ಪರಿಹಾರಕ್ಕೆ 2800 ರೂ. ನಂತೆ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಇದಕ್ಕಾಗಿ 460 ಕೋಟಿ ರೂ. ಗಳನ್ನು 20 ಲಕ್ಷ ರೈತರಿಗೆ ಒದಗಿಸಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ಅಂದರೆ ಮಾರ್ಚ್‍ರಿಂದ ಈ ವರೆಗೆ 87 ಮಿ.ಮೀ. ವಾಡಿಕೆ ಮಳೆ ಆಗಬೇಕಿತ್ತು. ಈ ವರ್ಷ 123 ಮಿ.ಮೀ. ಮಳೆ ಆಗಿದೆ. ಅದರಲ್ಲಿ 8 ಜಿಲ್ಲೆಗಳಲ್ಲಿ ಅತ್ಯಧಿಕ, 8 ಜಿಲ್ಲೆಗಳಲ್ಲಿ ವಾಡಿಕೆ ಮಳೆ ಆಗಿದೆ. ರಾಜ್ಯದ ಜಲಾಶಯಗಳಲ್ಲಿ ಪ್ರಸ್ತುತ ನೀರಿನ ಸಂಗ್ರಹಣಾ ಸಾಮಥ್ರ್ಯದ ಶೇ.20 ರಷ್ಟು ನೀರು ಸಂಗ್ರಹವಾಗಿದೆ. ರಾಜ್ಯದಾದ್ಯಂತ ಮಳೆ ಆಗುತ್ತಿರುವ ಕಾರಣ ಮುಂದಿನ ದಿನಗಳಲ್ಲಿ ಇದು ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಅದೇ ರೀತಿ, ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಬರ ಪರಿಹಾರ ಕ್ರಮಗಳು ಮತ್ತು ಮುಂಗಾರು ಸಿದ್ಧತೆ ಮತ್ತು ಸಂಬಂಧಿಸಿದ ವಿಷಯಗಳ ಕುರಿತು ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಮಾಹಿತಿ ಪಡೆಯಲಾಯಿತು ಎಂದು ಉಲ್ಲೇಖಿಸಿದರು.

ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ತಗಡೂರು ಹಾಗೂ ಕೆ.ಸಾಲುಹುಂಡಿ ಗ್ರಾಮಗಳಲ್ಲಿ ಕಾಲರಾ ತಲೆದೋರಿದೆ. ಕಲುಷಿತ ನೀರು ಇದಕ್ಕೆ ಕಾರಣವಾಗಿದೆ. ಸಂಬಂಧಪಟ್ಟ ಇಂಜಿನಿಯರ್‍ಗಳು ಕುಡಿಯಲು ಯೋಗ್ಯ ನೀರು ಒದಗಿಸಲು ವಿಫಲವಾಗಿದ್ದಾರೆ. ನೀರಿನ ಮೂಲವು ಕುಡಿಯಲು ಯೋಗ್ಯವಾಗಿದೆಯೇ, ಇಲ್ಲವೇ ಎಂದು ಪರಿಶೀಲಿಸದಿರುವುದು ದೊಡ್ಡ ಅಪರಾಧ. ಕೆ.ಸಾಲುಹುಂಡಿಯಲ್ಲಿ 40ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿ, ಒಬ್ಬ ಯುವಕ ಮೃತಪಟ್ಟಿದ್ದಾನೆ. ಇದು ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಆಗಿದೆ. ಕಾಲರಾ ಅಥವಾ ಇನ್ನಿತರ ಸಾಂಕ್ರಾಮಿಕಗಳು ಕಾಣಿಸಿಕೊಂಡರೆ ಹಿರಿಯ ಅಧಿಕಾರಿಗಳನ್ನೆ ಜವಾಬ್ದಾರರನ್ನಾಗಿಸಬಹುದು ಎಂದು ಅವರು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಕೃಷ್ಣ ಭೈರೇಗೌಡ, ಎಚ್.ಕೆ.ಪಾಟೀಲ್, ಕೆ.ಎಚ್.ಮುನಿಯಪ್ಪ, ಪ್ರಿಯಾಂಕ್ ಖರ್ಗೆ, ಶಿವಾನಂದ ಪಾಟೀಲ್, ಚಲುವರಾಯಸ್ವಾಮಿ, ಸಂತೋಷ್ ಲಾಡ್, ಭೈರತಿ ಸುರೇಶ್, ಶಿವರಾಜ್ ತಂಗಡಗಿ, ರಹೀಂ ಖಾನ್, ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್ ಸೇರಿದಂತೆ ಪ್ರಮುಖರಿದ್ದರು.

ಒಂದೇ ವರ್ಷದಲ್ಲಿ 842 ರೈತರ ಆತ್ಮಹತ್ಯೆ..!

ರಾಜ್ಯದಲ್ಲಿ 2023-24ರಲ್ಲಿ 842 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ 90 ಮನವಿಗಳು ತಿರಸ್ಕೃತವಾಗಿದೆ. 132 ಡಿಬಿಟಿಗೆ ಬಾಕಿಯಾಗಿದೆ. 62 ಉಪವಿಭಾಗಾಧಿಕಾರಿಗಳ ಹಂತದಲ್ಲಿ ಬಾಕಿ ಇದೆ. ಉಳಿದ ರೈತರ ಕುಟುಂಬಗಳಿಗೆ ಪರಿಹಾರ ವಿತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಇದರಲ್ಲಿ ಬಹಳ ಪ್ರಕರಣಗಳು ವಿಧಿ ವಿಜ್ಞಾನ ವರದಿಯ ನಿರೀಕ್ಷೆಯಲ್ಲಿರುವುದರಿಂದ ವಿಳಂಬವಾಗಿದೆ. ಈ ಪ್ರಕರಣಗಳಲ್ಲಿಯೂ ತ್ವರಿತವಾಗಿ ಪರಿಹಾರ ವಿತರಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News