ತುಂಗಭದ್ರಾ ಅಣೆಕಟ್ಟೆಯ ಕ್ರಸ್ಟ್ ಗೇಟ್ ರಿಪೇರಿಗೆ ನೀರಿನೊಳಗೆ ಕೆಲಸ ಮಾಡುವ ತಂಡ ಸಿದ್ಧ: ಸಚಿವ ಶಿವರಾಜ ತಂಗಡಗಿ

Update: 2024-08-12 12:58 GMT

ಹೊಸಪೇಟೆ: ತುಂಗಭದ್ರ ಅಣೆಕಟ್ಟೆಯಲ್ಲಿರುವ ನೀರನ್ನು ಉಳಿಸುವ ಉದ್ದೇಶದಿಂದ ನೀರಿನೊಳಗೆ ಪ್ಲೇಟ್ ಇಳಿಸಲು ನಿರ್ಧರಿಸಲಾಗಿದ್ದು, ಪರಿಣಿತ ತಂಡ ಒಂದನ್ನು ಸ್ಥಳಕ್ಕೆ ಕರೆಯಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರ 98,000 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದ್ದು, ಪರಿಣಾಮವಾಗಿ ಎರಡುವರೆ ಅಡಿ ಗೇಜ್ ಕಡಿಮೆಯಾಗಿದೆ. ಬೆಳಿಗ್ಗೆಯಿಂದ ನದಿಗೆ 1.40 ಲಕ್ಷ ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ ಎಂದರು.

ಒಂದು ತಂಡ ನೀರು ಕಡಿಮೆಯಾದ ಬಳಿಕ ಗೇಟ್ ಅಳವಡಿಕೆ ಬಗ್ಗೆ ಸಲಹೆ ನೀಡಿದೆ. ನೀರನ್ನು ಉಳಿಸುವ ಉದ್ದೇಶದಿಂದ ನಾನು ಹಾಗೂ ಸಂಸದರು ತಡ ರಾತ್ರಿವರೆಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಜಿಂದಾಲ್ ನಿಂದ ಪರಿಣಿತ ತಂತ್ರಜ್ಞರು ಹಾಗೂ ಇಂಜಿನಿಯರ್ ಗಳ ತಂಡವನ್ನು ಸೋಮವಾರ ರಾತ್ರಿಯೇ ಕರೆಸಿಕೊಂಡಿದ್ದೇವೆ. ಆ ತಂಡ ನೀರು ಖಾಲಿಯಾಗದಂತೆ ನೀರಿನೊಳಗೆ ಕೆಲಸ ಮಾಡುವ ಬಗ್ಗೆ ಸಲಹೆ ನೀಡಿದೆ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ಮುಖ್ಯಮಂತ್ರಿಗಳ ಜೊತೆ ಕೂಡ ರಾತ್ರಿಯೇ ಚರ್ಚೆ ನಡೆಸಿದ್ದು ಅವರು ಕೂಡ ಕೆಲವೊಂದು ಸಲಹೆ ನೀಡಿದ್ದು ಜಿಂದಾಲ್ ತಾಂತ್ರಿಕ ತಂಡದೊಂದಿಗೂ ಫೋನ್ನಲ್ಲಿ ಚರ್ಚಿಸಿದ್ದಾರೆ ಎಂದು ತಿಳಿಸಿದರು.

ಅಣೆಕಟ್ಟೆಯ ಮೇಲೆ ಕೆಲಸ ಮಾಡುವುದರಿಂದ ಕ್ರೇನ್ ನನ್ನು ಬಳಕೆ ಮಾಡಬೇಕಾಗುತ್ತದೆ. ಇದರಿಂದ ಸೇತುವೆ ಮೇಲೆ ಒತ್ತಡ ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ಎಷ್ಟು ತೂಕದ ಕ್ರೇನನ್ನು ಬಳಸಬೇಕು ಎಂಬುದರ ಬಗ್ಗೆಯೂ ಕೂಡ ಚರ್ಚೆ ನಡೆದಿದೆ. ಈ ಸಂಬಂಧ ಪ್ಲೇಟ್ ಸಿದ್ದಪಡಿಸಲಾಗುತ್ತಿರುವ ಸ್ಥಳಕ್ಕೆ ಕೂಡ ನಾನು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಪರಿಣಿತ ತಜ್ಞ ಕನ್ನಯ್ಯ ನಾಯ್ಡು ಅವರು ಡಿಸೈನ್ ಕಳಿಸಿದ್ದು ಅದರಂತೆ ಸ್ಥಳೀಯವಾಗಿ ನಾರಾಯಣ ಇಂಜಿನಿಯರಿಂಗ್ ಹಾಗೂ ಹಿಂದುಸ್ತಾನ್ ಸಂಸ್ಥೆ ಗಳು ಪ್ಲೇಟ್ ಸಿದ್ಧಪಡಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಬಗ್ಗೆ ರೈತರು ಆತಂಕ ಪಡುವುದು ಬೇಡ. ನೀರಿನ ಒಳಗೆ ಪ್ಲೇಟ್ ಇಳಿಸಿ ಕೆಲಸ ಮಾಡುವ ಪ್ರಯತ್ನ ಮಾಡಲಾಗುವುದು. ಸ್ಥಳದಲ್ಲಿಯೇ ಸಂಸದ ರಾಜಶೇಖರ್ ಹಿಟ್ನಾಳ್ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ್ ಅವರ ಜೊತೆ ಸ್ಥಳದಲ್ಲಿ ಇದ್ದು ಇದ್ದು ನೀರು ಉಳಿಸಲು ಮಾಡಬಹುದಾದ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದರು.

ಇನ್ನು ಘಟನೆಯ ವಿಷಯ ತಿಳಿಯುತ್ತಲೇ ಸೋಮವಾರ ನಸುಕಿನಲ್ಲಿ ಸ್ಥಳಕ್ಕೆ ಆಗಮಿಸಿದ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರು ಕಳೆದ ಎರಡು ದಿನಗಳಿಂದ ಸ್ಥಳದಲ್ಲಿಯೇ ತಂಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News