ಮಲ ಹೊರುವ ಪದ್ಧತಿ ನಿಷೇಧ ಕಾಯ್ದೆ: 47 ಪ್ರಕರಣಗಳು ದಾಖಲು, ಒಂದರಲ್ಲಿ ಮಾತ್ರ ಶಿಕ್ಷೆ; ಹೈಕೋರ್ಟ್‍ಗೆ ಮಾಹಿತಿ

Update: 2024-01-30 17:17 GMT

ಬೆಂಗಳೂರು: ಕರ್ನಾಟಕದಲ್ಲಿ ಮಲ ಹೊರುವ ಪದ್ಧತಿಗೆ ನಿಷೇಧವಿದ್ದರೂ 1993ರಿಂದ ಇಲ್ಲಿವರೆಗೆ ಒಟ್ಟು 47 ಪ್ರಕರಣಗಳು ದಾಖಲಾಗಿದ್ದು, 92 ಮಂದಿ ಸಾವನ್ನಪ್ಪಿದ್ದಾರೆ. ಒಂದು ಪ್ರಕರಣದಲ್ಲಿ ಮಾತ್ರ ಶಿಕ್ಷೆಯಾಗಿದೆ ಎಂದು ಹೈಕೋರ್ಟ್‍ಗೆ ಸರಕಾರ ಮಾಹಿತಿ ನೀಡಿದೆ.

‘ಮಲ ಹೊರುವ ಪದ್ಧತಿ ಜೀವಂತ’ ಎಂಬ ಮಾಧ್ಯಮ ವರದಿಯ ಆಧರಿಸಿ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ಸರಕಾರದ ಪರ ವಕೀಲರು ವರದಿ ಸಲ್ಲಿಸಿದರು.

ವರದಿಯಲ್ಲಿ ಮನುಷ್ಯರಿಂದ ಮಲಗುಂಡಿಗಳನ್ನು ಸ್ವಚ್ಛಗೊಳಿಸುವ ಪದ್ಧತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ-2013ರ ಉಲ್ಲಂಘನೆಯಡಿ 87 ಪ್ರಕರಣ ದಾಖಲಾಗಿದ್ದು, 6 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ ಎಂದು ತಿಳಿಸಲಾಗಿದೆ.

ಪ್ರಕರಣದಲ್ಲಿ ಜ.8ರಂದು ಹೈಕೋರ್ಟ್ ನೀಡಿದ್ದ ನಿರ್ದೇಶನದಂತೆ ಸರಕಾರದ ಪರವಾಗಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ ಎಸ್.ವಿ.ಕಲಾವತಿ ಅವರ ಅನುಪಾಲನಾ ವರದಿಯನ್ನು ಸರಕಾರದ ಪರ ವಕೀಲರು ನ್ಯಾಯಪೀಠಕ್ಕೆ ಸಲ್ಲಿಸಿದರು.

ವರದಿಯನ್ನು ದಾಖಲಿಸಿಕೊಂಡ ನ್ಯಾಯಪೀಠ, ಪರಿಹಾರದ ವಿಚಾರದಲ್ಲಿ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟು, ಸರಕಾರದ ವರದಿಗೆ ಅರ್ಜಿದಾರರಿಂದ ಆಕ್ಷೇಪಣೆ ಸಲ್ಲಿಸಲು ಸೂಚಿಸಿ ವಿಚಾರಣೆಯನ್ನು ಮುಂದೂಡಿತು.

ರಾಜ್ಯದಲ್ಲಿ 1993ರಿಂದ ಇಲ್ಲಿವರೆಗೆ ಮಲ ಹೊರುವ ಪದ್ಧತಿ ನಿಷೇಧ ಕಾಯ್ದೆ ಅಡಿ 47 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 92 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ 15 ಪ್ರಕರಣಗಳನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಿಸಿಕೊಳ್ಳಲಾಗಿದೆ. ಒಟ್ಟು 47 ಪ್ರಕರಣಗಳಲ್ಲಿ 15 ಪ್ರಕರಣಗಳು ವಿಚಾರಣಾ ಹಂತದಲ್ಲಿದ್ದು, 1 ಪ್ರಕರಣದಲ್ಲಿ ಶಿಕ್ಷೆಯಾಗಿದೆ. 2 ಪ್ರಕರಣಗಳಲ್ಲಿ ವರದಿ ಬಾಕಿ ಇದೆ. 4 ಪ್ರಕರಣಗಳಲ್ಲಿ ಬಿ ರಿಪೋರ್ಟ್ ಸಲ್ಲಿಸಲಾಗಿದೆ. 22 ಪ್ರಕರಣಗಳು ಖುಲಾಸೆಗೊಂಡಿವೆ ಎಂದು ಅನುಪಾಲನಾ ವರದಿಯಲ್ಲಿ ವಿವರಿಸಲಾಗಿದೆ.

2013ರಿಂದ ಈವರೆಗೂ ಮನುಷ್ಯರಿಂದ ಶೌಚಗುಂಡಿಗಳನ್ನು ಸ್ವಚ್ಛಗೊಳಿಸುವ ಪದ್ಧತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ-2013 ರಡಿ 87 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 11 ಪ್ರಕರಣಗಳನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಿಸಿಕೊಳ್ಳಲಾಗಿದೆ. 28 ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇದ್ದು, 6 ಪ್ರಕರಣಗಳಲ್ಲಿ ಶಿಕ್ಷೆ ಆಗಿದೆ. 21 ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಗೊಂಡಿದ್ದಾರೆ. 11 ಪ್ರಕರಣಗಳು ವಿಚಾರಣಾ ಹಂತದಲ್ಲಿದ್ದು, 22 ಪ್ರಕರಣಗಳು ಸುಳ್ಳು ಪ್ರಕರಣಗಳಾಗಿವೆ ಎಂದು ವರದಿಯಲ್ಲಿ ಮಾಹಿತಿ ನೀಡಲಾಗಿದೆ.

ಶೌಚ ಗುಂಡಿಗಳನ್ನು ಸ್ವಚ್ಛಗೊಳಿಸುವಾಗ ಮೃತಪಟ್ಟ ಕಾರ್ಮಿಕರ ಅವಲಂಬಿತರಿಗೆ ನೀಡಲಾಗುವ ಪರಿಹಾರವನ್ನು 10 ಲಕ್ಷದಿಂದ 30 ಲಕ್ಷಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಿಂದ ಇಲ್ಲಿವರೆಗೆ 1,462 ಫಲಾನುಭವಿಗಳಿಗೆ 32.66 ಕೋಟಿ ರೂ. ಪರಿಹಾರ ನೀಡಲಾಗಿದೆ.

ರಾಜ್ಯ ಸರಕಾರ ನಡೆಸಿದ ಸಮೀಕ್ಷೆಯಲ್ಲಿ 7,483 ಶೌಚಗುಂಡಿ ಸ್ವಚ್ಛಗೊಳಿಸುವ ಕಾರ್ಮಿಕರನ್ನು ಗುರುತಿಸಲಾಗಿದ್ದು, ಕೇಂದ್ರ ಸರಕಾರ 1,833 ಕಾರ್ಮಿಕರಿಗೆ ತಲಾ 40 ಸಾವಿರ ರೂ. ಪರಿಹಾರ ಧನ ನೀಡಿದೆ. ಉಳಿದ ಕಾರ್ಮಿಕರಿಗೆ ರಾಜ್ಯ ಸರಕಾರ ತಲಾ 40 ಸಾವಿರ ರೂ. ಪಾವತಿಸಿದೆ. ರಾಮನಗರ, ಬೆಂಗಳೂರು, ಕಲಬುರಗಿ ಹಾಗೂ ಕೋಲಾರದಲ್ಲಿ ನಡೆದ ಘಟನೆಗಳಲ್ಲಿ ಮೃತ ಕುಟುಂಬದ ಅವಲಂಬಿತ ಸದಸ್ಯರಿಗೆ ಆರ್ಥಿಕ ನೆರವು, ಪರ್ಯಾಯ ಉದ್ಯೋಗ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News