ಲಂಚ ಕೇಳುವ ಅಧಿಕಾರಿಗಳ ವಿರುದ್ಧ ದೂರು ನೀಡಿ: ಡಿ.ಕೆ.ಶಿವಕುಮಾರ್

Update: 2023-12-02 13:46 GMT

ಬೆಂಗಳೂರು: ಕಂದಾಯ, ಪಂಚಾಯಿತಿ ಅಧಿಕಾರಿ ಸೇರಿದಂತೆ ಯಾವುದೇ ಸರಕಾರಿ ಅಧಿಕಾರಿಗಳು ನಿಮ್ಮ ಕೆಲಸ ಮಾಡಿಕೊಡಲು ಲಂಚ ಕೇಳಿದರೆ ನೇರವಾಗಿ ಜಿಲ್ಲಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ದೂರು ನೀಡಬಹುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಲಹೆ ನೀಡಿದ್ದಾರೆ.

ಶನಿವಾರ ಕನಕಪುರದಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಗೂ ಮುನ್ನ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಯಾರೊಬ್ಬರೂ ಒಂದು ರೂಪಾಯಿ ಲಂಚ ಕೊಡಲು ಹೋಗಬೇಡಿ. ಲಂಚ ಕೇಳುವವರ ವಿರುದ್ಧ ದೂರು ನೀಡಲು ಎಲ್ಲ ಸರಕಾರಿ ಕಚೇರಿಗಳ ಮುಂದೆ ಶೀಘ್ರದಲ್ಲೆ ದೂರವಾಣಿ ಸಂಖ್ಯೆಯನ್ನು ಹಾಕಲಿದ್ದೇವೆ ಎಂದರು.

ಜನರ ಅಹವಾಲುಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು. ನಮ್ಮ ತಾಲೂಕಿನಲ್ಲಿ ಉತ್ತಮವಾದ ಆಡಳಿತ ನಡೆಯಬೇಕು. ಈ ಹಿಂದಿನ ತಹಶೀಲ್ದಾರ್ ಇದ್ದಾಗ ಒಂದಷ್ಟು ತೊಂದರೆಗಳು ಇದ್ದವು. ಕನಕಪುರ-ರಾಮನಗರ ಜಿಲ್ಲೆಯ ಜನರ ಎಲ್ಲ ಜಮೀನುಗಳಿಗೆ ಸೂಕ್ತ ದಾಖಲೆಗಳನ್ನು ಅಧಿಕಾರಿಗಳು ಮಾಡಿಕೊಡಬೇಕು. ಡ್ರೋನ್ ತಂತ್ರಜ್ಞಾನದ ಮೂಲಕ ಜಮೀನುಗಳ ಸರ್ವೇ ಕಾರ್ಯ ನಡೆಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ಜಮೀನಿನ ಪೋಡಿ- ಪಹಣಿ ದಾಖಲೆಗಳು ನಿಮ್ಮದೇ ಮೊಬೈಲ್ ನಲ್ಲಿ ದೊರೆಯುತ್ತದೆ ಎಂದು ಅವರು ಹೇಳಿದರು.

ಈಗಾಗಲೇ ಭೂಮಿ ಯೋಜನೆಯಡಿ ಪಹಣಿ-ಪೋಡಿ ದಾಖಲೆಗಳು ಸಿಗುತ್ತಿವೆ. ದಿಶಾ ವೆಬ್‍ಸೈಟಿನಲ್ಲಿ ನಿಮ್ಮ ಜಮೀನಿನ ವಾಸ್ತವ ಸ್ಥಿತಿ ತಿಳಿಯುವಂತಹ ಕಾರ್ಯಕ್ರಮ ರೂಪಿಸಲಾಗಿದೆ. ಬೆಂಗಳೂರು ನಗರದಲ್ಲಿ ಆಸ್ತಿಗಳ ಡಿಜೀಟಲೀಕರಣ ಮತ್ತು ಮರು ಸರ್ವೇ ಕೆಲಸ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದರು.

ಜನಸ್ಪಂದನ ಸಭೆಯಲ್ಲಿ ಅರ್ಜಿಗಳನ್ನು ನೀಡಿ ಸ್ವೀಕೃತಿ ದಾಖಲೆಗಳನ್ನು ಜನರು ಪಡೆಯಬೇಕು. ಇಲ್ಲಿ ಸಲ್ಲಿಸಿದ ಅಹವಾಲುಗಳನ್ನು ಪರಿಶೀಲನೆ ನಡೆಸಿ ಕಾನೂನಿನ ಚೌಕಟ್ಟಿನಲ್ಲಿ ಇತ್ಯರ್ಥ ಮಾಡಲಾಗುವುದು. ನಾನು ಸಹ ಕಾಲ, ಕಾಲಕ್ಕೆ ಅರ್ಜಿಗಳ ಸ್ಥಿತಿಗತಿಗಳನ್ನು ತಿಳಿದುಕೊಳ್ಳುತ್ತೇನೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಕನಕಪುರ ತಾಲೂಕಿನಲ್ಲಿ 1,16,290 ಮನೆಗಳು ಗೃಹಜ್ಯೋತಿ ಯೋಜನೆಯ ಲಾಭ ಪಡೆದಿವೆ. 3,200 ಮನೆಗಳಿಗೆ ಈ ಸೌಲಭ್ಯ ತಾಂತ್ರಿಕ ಕಾರಣಗಳಿಂದ ದೊರೆತಿಲ್ಲ. ಐದು ಗ್ಯಾರಂಟಿಗಳಲ್ಲಿ ನಾಲ್ಕು ಗ್ಯಾರಂಟಿಗಳನ್ನು ಸರಕಾರ ಈಡೇರಿಸಿದ್ದು, ಗೃಹಲಕ್ಷ್ಮಿ ಯೋಜನೆಯಡಿ ಒಂದಷ್ಟು ಜನರಿಗೆ ತಾಂತ್ರಿಕ ಕಾರಣಗಳಿಂದ ಹಣ ಬಂದಿಲ್ಲ ಎಂದು ಅವರು ತಿಳಿಸಿದರು.

ಕನಕಪುರದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣವಾಗುತ್ತಿದೆ. ತಾಯಿ-ಮಕ್ಕಳ ಆಸ್ಪತ್ರೆ ಉದ್ಘಾಟನೆಯಾಗಿ ಆರೋಗ್ಯದ ವಿಚಾರದಲ್ಲಿ ಜನರಿಗೆ ಉತ್ತಮ ಸೌಲಭ್ಯ ದೊರೆಯುತ್ತಿದೆ. ಆದಷ್ಟು ಬೇಗ ಖಾಲಿ ಇರುವ ವೈದ್ಯರ ಹುದ್ದೆಗಳನ್ನು ತುಂಬಲಾಗುವುದು ಎಂದು ಅವರು ಹೇಳಿದರು.

ಯಾರು ಕಾನುನೂಬದ್ಧವಾಗಿ ಭೂಮಿ ಉಳುಮೆ ಮಾಡುತ್ತಿದ್ದಾರೆ. ಅವರಿಗೆ ಭೂಮಿ ಹಂಚಿಕೆ ಮಾಡುವಂತೆ ಹೇಳಿದ್ದೇನೆ. ಬರುವ ಜನವರಿ ತಿಂಗಳಿನಲ್ಲಿ ಮತ್ತೊಮ್ಮೆ ಜನತಾ ದರ್ಶನ ಮಾಡಲಿದ್ದು, ಇಂದೇ ಜಿಲ್ಲಾಧಿಕಾರಿಗಳಿಗೆ ಮುಂದಿನ ಭೇಟಿಯ ದಿನಾಂಕ ತಿಳಿಸುತ್ತೇನೆ. ನಂತರ ವಾರಕ್ಕೆ ಒಂದು ದಿನ ಕ್ಷೇತ್ರದ ಜನರಿಗೆ ಸಮಯ ಕೊಡುವಂತೆ ನೋಡಿಕೊಳ್ಳುತ್ತೇನೆ. ಸಾರ್ವಜನಿಕರು ಯಾವುದೆ ತೊಂದರೆಗಳು ಇದ್ದರೂ ನೇರವಾಗಿ ನನ್ನನ್ನೇ ಸಂಪರ್ಕಿಸಿ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News