ರಾಜ್ಯದಲ್ಲಿ ಖಾಲಿಯಿರುವ 2 ಲಕ್ಷಕ್ಕೂ ಅಧಿಕ ಹುದ್ದೆ ಭರ್ತಿಗೆ ಕ್ರಮ: ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಜು.6: ‘ರಾಜ್ಯ ಸರಕಾರದಲ್ಲಿ ಸುಮಾರು 2.10ಲಕ್ಷ ಹುದ್ದೆಗಳು ಖಾಲಿ ಇದ್ದು, ಖಾಲಿ ಇರುವ ಎಲ್ಲ ಹುದ್ದೆಗಳನ್ನು ಹಂತ-ಹಂತವಾಗಿ ಭರ್ತಿ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಗುರುವಾರ ವಿಧಾನ ಪರಿಷತ್ತಿನಲ್ಲಿ ಬಿಜೆಪಿಯ ಸದಸ್ಯ ಗೋಪಿನಾಥ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ 7,72,025 ಹುದ್ದೆಗಳು ಮಂಜೂರಾಗಿವೆ. ಅದರಲ್ಲಿ 5,16,105 ಹುದ್ದೆಗಳು ಭರ್ತಿಯಾಗಿವೆ. ಸರಿ ಸುಮಾರು 2.10ಲಕ್ಷ ಹುದ್ದೆಗಳು ಖಾಲಿ ಇವೆ. ಮಂಜೂರಾದ ಹುದ್ದೆಗಳಿಗೆ ಹೋಲಿಸಿದರೆ ಶೇ. 33ರಷ್ಟು ಹುದ್ದೆಗಳು ಖಾಲಿ ಇವೆ. ಅವುಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸರಕಾರಿ ಹುದ್ದೆಗಳ ಜತೆಗೆ 75,415 ಹುದ್ದೆಗಳನ್ನು ಹೊರ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ. ಸರಕಾರದ ಕೆಲಸಕ್ಕೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಅದರಲ್ಲೂ ಸಿ ಮತ್ತು ಡಿ ವರ್ಗದ ಹುದ್ದೆಗಳನ್ನು ಹೆಚ್ಚಾಗಿ ಹೊರ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ನಿವೃತ್ತಿಯಾದ ಅಧಿಕಾರಿಗಳನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗಿದೆ. ಎ, ಬಿ, ವೃಂದದ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಸರಕಾರದ ಕೆಲಸಕ್ಕೆ ತೊಂದರೆಯಾಗದಂತೆ ಎಲ್ಲ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದರು.