ಬಿಬಿಎಂಪಿ ಮುಖ್ಯ ಕಚೇರಿ ಆವರಣದಲ್ಲಿ ಬೆಂಕಿ: ತನಿಖೆಗೂ ಮುನ್ನ ಅಂತಿಮ ತೀರ್ಮಾನ ಬೇಡ ಎಂದ ಡಿಕೆ ಶಿವಕುಮಾರ್‌

Update: 2023-08-12 10:31 GMT

ಬೆಂಗಳೂರು: ʼಬಿಬಿಎಂಪಿ ಮುಖ್ಯ ಕಚೇರಿ ಆವರಣದಲ್ಲಿ ನಡೆದ ದುರ್ಘಟನೆ ಬಗ್ಗೆ ನಾನು ತನಿಖೆಗೆ ಆದೇಶಿಸಿದ್ದೇನೆ. ಬಿಬಿಎಂಪಿ ಅಧಿಕಾರಿಗಳು, ಪೊಲೀಸರು ಹಾಗೂ ಚುನಾಯಿತ ಪ್ರತಿನಿಧಿಗಳ ತಂಡಗಳಿಂದ ಈ ಪ್ರಕರಣದ ವಿಚಾರಣೆಗೆ ಆದೇಶಿಸಿದ್ದೇನೆʼ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ತಿಳಿಸಿದ್ದಾರೆ. 

ʼʼಈ ಪ್ರಯೋಗಾಲಯ ಇದ್ದ ಜಾಗ ಸೂಕ್ತವಾಗಿರಲಿಲ್ಲ. ಇಂತಹ ಪ್ರಯೋಗಾಲಯಗಳನ್ನು ಈ ಜಾಗದಲ್ಲಿ ಇಟ್ಟಿರುವುದು ತಪ್ಪು. ಎಲ್ಲಾದರೂ ಮುಕ್ತ ಪ್ರದೇಶದಲ್ಲಿ ಇಡಬೇಕು. ಇದೆಲ್ಲದರ ಬಗ್ಗೆ ತನಿಖೆ ಮುಗಿದು ವರದಿ ಬಂದ ನಂತರ ನಾನು ಇನ್ನಷ್ಟು ಮಾಹಿತಿ ನೀಡುತ್ತೇನೆ" ಎಂದು ತಿಳಿಸಿದರು.

ಈ ಹಿಂದೆ ಇಂತಹ ಅಗ್ನಿ ದುರಂತ ನಡೆದು ಅನೇಕ ಫೈಲ್ ನಾಶ ಆಗಿದ್ದವು ಎಂದು ಕೇಳಿದಾಗ, "ಈ ಹಿಂದೆ ಇಂತಹ ಘಟನೆ ನಡೆದು, ಫೈಲ್ ಗಳನ್ನು ಮುಚ್ಚಿಹಾಕಲು ಸುತ್ತಿರುವ ಉದಾಹರಣೆಗಳಿವೆ. ಈ ಬಾರಿ ದುರಂತದಲ್ಲಿ ಫೈಲ್ ಗಳಿಗೆ ಯಾವುದೇ ಹಾನಿ ಆಗಿಲ್ಲ. ಅವುಗಳನ್ನು ಬಹಳ ಜಾಗರೂಕತೆಯಿಂದ ಸ್ಥಳಾಂತರ ಮಾಡುವ ಪ್ರಯತ್ನ ಮಾಡಲಾಗುತ್ತಿದೆ" ಎಂದು ತಿಳಿಸಿದರು.

ʼʼಆರೋಪ ಹಿಂಪಡೆಯುತ್ತೇನೆʼʼ

ಪಕ್ಷದ ಅಧಿಕೃತ ಖಾತೆಯಿಂದ ಇದು ಪೂರ್ವನಿಯೋಜಿತ ಕೃತ್ಯ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, "ನಾನು ಆ ಆರೋಪ ಹಿಂಪಡೆಯುತ್ತೇನೆ. ಈ ಪ್ರಕರಣದ ತನಿಖೆ ಮುಗಿಯುವವರೆಗೂ ಯಾವುದೇ ನಿರ್ಧಾರಕ್ಕೆ ಬರುವುದು ಬೇಡ. ತನಿಖೆ ಮುಗಿಯಲಿ. ನಂತರ ತೀರ್ಮಾನ ಮಾಡೋಣ" ಎಂದು ತಿಳಿಸಿದರು.

ಬಿಬಿಎಂಪಿಯಲ್ಲಿ ದಾಖಲೆಗಳ ರಕ್ಷಣೆ ಬಗ್ಗೆ ಕೇಳಿದಾಗ, "ಅದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ನಿನ್ನೆ ರಾತ್ರಿ ಮಧ್ಯರಾತ್ರಿ ವರೆಗೂ ಬಿಬಿಎಂಪಿ ಕಚೇರಿಯಲ್ಲಿದ್ದು ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ" ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News