ನೀರಿನಲ್ಲಿ ಮೀನುಗಳ ಮಾರಣಹೋಮ; ದನಕರುಗಳಿಗೆ ನೀರು ಕುಡಿಸಲು ಆತಂಕ ಪಡುತ್ತಿರುವ ಗ್ರಾಮಸ್ಥರು
ಮುಂಡಗೋಡ: ಬೇಡ್ತಿ ನದಿಯು ಹರಿಯುತ್ತಿರುವ ಶಿಡ್ಲ್‍ಗುಂಡಿ, ಯರೇಬೈಲ್, ಬಸನಾಳ ಕಳಕಿಕೇರಾ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಹರಿಯುವ ನೀರಿನ ಅಡೆತಡೆಗಳಲ್ಲಿ ತುಂಬಿರುವ ನದಿಯ ನೀರಿನಲ್ಲಿ ಹಲವಾರು ಮೀನುಗಳು ಸಾವನ್ನಪ್ಪಿದ್ದು, ನೀರಿನಲ್ಲಿ ವಿಷಹಾಕಿ ಮೀನುಗಳನ್ನು ಕೊಲ್ಲಲಾಗಿದೆಯೇ ಎಂದು ಗ್ರಾಮಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ.
ಮೀನುಗಳು ಸತ್ತು ನೀರಿನಲ್ಲಿ ತೇಲುತ್ತಿರುವುದು ಕಂಡು ಬಂದಿರುವುದರಿಂದ ದನಕರುಗಳನ್ನು ಮೇಯಿಸಲು ಕಾಡು ಪ್ರದೇಶಕ್ಕೆ ಕರೆದುಕೊಂಡು ಹೋಗುವ ಶಿಡ್ಲ್ ಗುಂಡಿ, ಯರೆಬೈಲ್, ಬಸನಾಳ, ಕಳಕಿಕೇರಾ ಗ್ರಾಮಸ್ಥರು ಹಾಗೂ ಗೌಳಿಗರು ದನಕರುಗಳಿಗೆ ಅಲ್ಲಿಯ ನೀರು ಕುಡಿಸಲು ಹಿಂಜರಿಯುತ್ತಿದ್ದಾರೆ.
ಶಿಡ್ಲಗುಂಡಿಯ ನೀರಿನಲ್ಲಿ ಎಲ್ಲೆಂದರಲ್ಲಿ ಮೀನುಗಳು ಸತ್ತು ಬಿದ್ದಿದ್ದು, ದೊಡ್ಡ ದೊಡ್ಡ ಮೀನುಗಳ ಕಳೇಬರ ಕಂಡು ಬರುತ್ತಿವೆ. ಹುಬ್ಬಳ್ಳಿಯಿಂದ ಬೇಡ್ತಿ ನದಿಗೆ ಹರಿಯುತ್ತಿರುವ ನೀರು ಏನಾದರೂ ರಾಸಾಯನಿಕ ವಸ್ತುಗಳು ಸೇರಿ ವಿಷಮಯವಾಗಿರಬಹುದು. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇಲ್ಲಿಯ ನೀರನ್ನು ಪರಿಶೀಲಿಸಿ ದನಕರುಗಳಿಗೆ ಕುಡಿಯಲು ಯೋಗ್ಯವೇ ಎಂಬುದನ್ನು ತಿಳಿಸಲಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.