ಪರಪ್ಪನ ಅಗ್ರಹಾರದಲ್ಲಿ ಪಂಚತಾರ ವ್ಯವಸ್ಥೆ ಹೊಸದೇನು ಅಲ್ಲ: ಎಚ್.ಡಿ. ಕುಮಾರಸ್ವಾಮಿ

Update: 2024-08-26 13:06 GMT

ಎಚ್.ಡಿ.ಕುಮಾರಸ್ವಾಮಿ (PTI)

ಮಂಡ್ಯ: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ಕೈದಿಗಳಿಗೆ ಪಂಚತಾರ ವ್ಯವಸ್ಥೆ ಮೊದಲಿನಿಂದಲೂ ಇದೆ, ಹೊಸದೇನು ಅಲ್ಲ. ಈಗ ನಟ ದರ್ಶನ್‌ಗೆ ನೀಡಿರುವ ಹೈಟೆಕ್ ವ್ಯವಸ್ಥೆಯಿಂದ ಪ್ರಚಾರಕ್ಕೆ ಬಂದಿದೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಸೋಮವಾರ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ ಅವರು, ಜೈಲಿನ ಪಂಚತಾರ ವ್ಯವಸ್ಥೆ ವಿಚಾರದ ಬಗ್ಗೆ ತನಿಖೆ ನಡೆಯಬೇಕು ಎಂದು ಡಿಜಿ ಮತ್ತು ಡಿಸಿಪಿ ನಡುವೆ ದೊಡ್ಡ ಗಲಾಟೆಯೇ ಆಗಿತ್ತು ಎಂದರು.

ಸರಕಾರ ಆರೋಪಿಗಳನ್ನು ಬೇರೆ ಜೈಲಿಗೆ ವರ್ಗಾಯಿಸಬೇಕು ಎಂದು ತೀರ್ಮಾನ ಮಾಡುತ್ತಿದೆಯಂತೆ. ಆದರೆ, ಈ ಸರಕಾರದ ಮೇಲೆ ಜನರಿಗೆ ನಂಬಿಕೆ ಬರಲು ಸಾಧ್ಯ ಇಲ್ಲ. ಏಕೆಂದರೆ. ರಾಜ್ಯದಲ್ಲಿ ಸರಕಾರವೇ ಇಲ್ಲ, ಸತ್ತೋಗಿದೆ. ಮುಖ್ಯಮಂತ್ರಿಗಳಿಗೆ ಅವರ ಹಗರಣದ ಬಗ್ಗೆ ಮಾತನಾಡಲು ಸಮಯ ಸಿಗುತ್ತಿಲ್ಲ. ಇನ್ನು ಆಡಳಿತದ ಮಾತೆಲ್ಲಿ ಎಂದು ಅವರು ಟೀಕಿಸಿದರು.

ತಮ್ಮದು ಹೈಟೆಕ್ ಸರಕಾರವೆಂದು ಗೃಹ ಸಚಿವ ಪರಮೇಶ್ವರ್ ಹೇಳುತ್ತಾರೆ. ಪರಪ್ಪನ ಅಗ್ರಹಾರದಲ್ಲಿ ಕೊಲೆ ಆರೋಪಿಗಳಿಗೆ ಹೈಟೆಕ್ ಸೌಲಭ್ಯ ಕೊಡುತ್ತಿರುವುದೇ ಅವರ ಹೈಟೆಕ್ ಆಡಳಿತ? ರೇಣುಕಾಸ್ವಾಮಿ ಕೊಲೆ ವಿಚಾರದಲ್ಲಿ ಅಧಿಕಾರಿಗಳಿಂದ ನ್ಯಾಯ ಸಿಗುವ ನಂಬಿಕೆ ಇಲ್ಲ. ನ್ಯಾಯಾಲಯದಿಂದಲೇ ಸಿಗಬೇಕು ಎಂದು ಅವರು ಆರೋಪಿಸಿದರು.

ಒಳ್ಳೆಯ ಮಳೆಯಾಗಿ ಎಲ್ಲ ಅಣೆಕಟ್ಟೆಗಳು ಭರ್ತಿಯಾಗಿವೆ. ತಮಿಳುನಾಡಿಗೆ ಸುಮಾರು 150 ಟಿಎಂಸಿ ನೂರು ಹರಿದಿದೆ. ಆದರೆ, ಮಂಡ್ಯ ಜಿಲ್ಲೆಯ ನಾಲೆಗಳ ಕೊನೆಭಾಗಕ್ಕೆ ನೀರೇ ಹರಿದಿಲ್ಲ. ಇನ್ನು 14 ತಿಂಗಳಾದರೂ ಕಾರ್ಖಾನೆಗೆ ಕಬ್ಬು ಕಟಾವು ಮಾಡಿಕೊಂಡಿಲ್ಲ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರಕಾರ ಇದೆಯಾ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News