ಆಹಾರ ತಜ್ಞ, ಲೇಖಕ, ವಿಶ್ಲೇಷಕ ಕೆ ಸಿ ರಘು ನಿಧನ
ಬೆಂಗಳೂರು, ಅ. 15: ಆಹಾರ ತಜ್ಞ, ಲೇಖಕ, ಅಂಕಣಕಾರ ಕೆ.ಸಿ.ರಘು ಅವರು ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ರವಿವಾರ ಬೆಳಗ್ಗೆ ನಿಧನರಾಗಿದ್ದಾರೆ.
ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದ ರಘು ಅವರಿಗೆ 60 ವರ್ಷ ವಯಸ್ಸಾಗಿತ್ತು. ಅವರ ಪತ್ನಿ ಆಶಾ ರಘು ಅವರು ಲೇಖಕಿ, ಕಾದಂಬರಿಕಾರ್ತಿ.
ಕೆ.ಸಿ.ರಘು ಅವರು ಅನೇಕ ವರ್ಷಗಳ ಕಾಲ ʼಫುಡ್ ಅಂಡ್ ನ್ಯೂಟ್ರೇಷನ್ ವರ್ಲ್ಡ್ʼ ಎಂಬ ಆಂಗ್ಲ ನಿಯತಕಾಲಿಕೆ ಸಂಪಾದಕರಾಗಿದ್ದರು. ಅನೇಕ ದಿನಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುತ್ತಿದ್ದರು. ಸಾಮಾನ್ಯ ವಿಜ್ಞಾನ ಮತ್ತು ಆರ್ಥಿಕತೆಯ ವಿಷಯಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ.
ರಘು ಅವರು ಸ್ಥಾಪಿಸಿದ ‘ಪ್ರಿಸ್ಟೀನ್ ಆಗ್ರ್ಯಾನಿಕ್ಸ್’ ಎಂಬ ಸಂಸ್ಥೆಯಲ್ಲಿ ನವಜಾತ ಶಿಶುಗಳಲ್ಲಿ ಕಂಡುಬರುವ ಮಾರಕ ಕಾಯಿಲೆಗಳಿಗೆ ಪೌಷ್ಟಿಕಾಂಶದ ಪರಿಹಾರವನ್ನು ಸಂಶೋಧನೆಯಿಂದ ಕಂಡುಹಿಡಿದು, ದೇಶ, ವಿದೇಶಗಳಿಗೆ ಒದಗಿಸುತ್ತಿದ್ದರು. ಈ ಕಾರ್ಯದಿಂದ ಸುಮಾರು 5 ಸಾವಿರ ನವಜಾತ ಶಿಶುಗಳನ್ನು ಸಾವಿನ ದವಡೆಯಿಂದ ಪಾರು ಮಾಡಲಾಗಿತ್ತು. ಭಾರತದಲ್ಲಿ ಈ ರೀತಿಯ ಪರಿಹಾರ ಒದಗಿಸುವ ಏಕೈಕ ಸಂಸ್ಥೆ ಇದಾಗಿತ್ತು ಎನ್ನಲಾಗಿದೆ.
ಕೆ.ಸಿ.ರಘು ಅವರು ಅನೇಕ ವಿಷಯಗಳ ಆಳವಾದ ಆಸಕ್ತಿ ಮತ್ತು ಜ್ಞಾನವನ್ನು ಉಳ್ಳವರಾಗಿ ಸದಾ ಅಧ್ಯಯನದಲ್ಲಿ ತೊಡಗಿಸಿಕೊಂಡಿರುತ್ತಿದ್ದರು. ಲೇಖಕರಾಗಿ ಆಹಾರಕ್ಕೆ ಸಂಬಂಧಪಟ್ಟ ಆಹಾರ ರಾಜಕೀಯ ಮತ್ತು ‘ತುತ್ತು ತತ್ವ’ ಪುಸ್ತಕಗಳನ್ನು ಪ್ರಕಟಿಸಿದ್ದರು.
ಇಲ್ಲಿನ ದಾಸರಹಳ್ಳಿಯ ಅಮೃತನಗರದಲ್ಲಿ ಅವರ ನಿವಾಸದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಕೆಲಕಾಲ ಇರಿಸಲಾಗಿತ್ತು. ಆ ಬಳಿಕ ಮೃತದೇಹವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಹಸ್ತಾಂತರಿಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ವಾರ್ತಾಭಾರತಿ ಡಿಜಿಟಲ್ ಚಾನಲ್ ನಲ್ಲಿ ರಸತತ್ವ ಎಂಬ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಚಾನಲ್ ನ ಚರ್ಚಾ ಹಾಗೂ ಸಂವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಸ್ತುತ ವಿದ್ಯಮಾನಗಳು ಹಾಗೂ ರಾಜಕೀಯ ಬೆಳವಣಿಗೆಗಳ ಬಗ್ಗೆ ಅವರು ಮಾಡುತ್ತಿದ್ದ ನಿಷ್ಠುರ ವಿಶ್ಲೇಷಣೆಯನ್ನು, ನೀಡುತ್ತಿದ್ದ ಒಳನೋಟವನ್ನು ಜನರು ಇಷ್ಟಪಡುತ್ತಿದ್ದರು.