ಬಿಬಿಎಂಪಿ ಅಕ್ರಮಗಳ ತನಿಖೆಗೆ ನಾಲ್ವರು ಐಎಎಸ್ ಅಧಿಕಾರಿಗಳ SIT ರಚನೆ

Update: 2023-08-07 16:05 GMT

ಬೆಂಗಳೂರು, ಆ.7: ರಾಜ್ಯ ಸರಕಾರವು ಬಿಬಿಎಂಪಿ ವ್ಯಾಪ್ತಿಯಲ್ಲಿ 2019ರಿಂದ ಈವರೆಗೆ ನಡೆದಿರುವ ಕಾಮಗಾರಿಗಳ ಅಕ್ರಮಗಳ ಕುರಿತು ನಾಲ್ವರು ಐಎಎಸ್ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ದಳಗಳನ್ನು ರಚಿಸಲಾಗಿದೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಆದೇಶದ ಮೇರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದಿರುವ ಘನತ್ಯಾಜ್ಯ ನಿರ್ವಹಣೆ, ರಸ್ತೆ ಅಭಿವೃದ್ಧಿ ಓಎಫ್‍ಸಿ ಕೇಬಲ್ ಅಳವಡಿಕೆ, ಬೃಹತ್ ನೀರು ಕಾಲುವೆ ಕಾಮಗಾರಿ, ಕೇಂದ್ರ ವಲಯ ನಗರ ಯೋಜನೆಗಳ ನಕ್ಷೆ ಮಂಜೂರಾತಿ, ಸ್ಮಾರ್ಟ್‍ಸಿಟಿ ಯೋಜನೆಯಡಿಯಲ್ಲಿನ ಕಾಮಗಾರಿಗಳು, ವಾರ್ಡ್ ಮಟ್ಟದ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ದೂರುಗಳನ್ನು ತನಿಖೆ ನಡೆಸಲು ಸೂಚಿಸಲಾಗಿದೆ.

ಈಗಾಗಲೇ ತನಿಖೆಗೆ ಒಳಪಡಿಸಿರುವ ಕಾಮಗಾರಿಗಳನ್ನು ಹೊರತುಪಡಿಸಿ ಉಳಿದವುಗಳನ್ನು ಸ್ಥಳ ಮತ್ತು ದಾಖಲಾತಿಗಳ ಪರಾಮರ್ಶೆಯೊಂದಿಗೆ ಆರೋಪಿತರ ಸ್ಪಷ್ಟ ಗುರುತಿಸುವಿಕೆಯ ಸಹಿತ ಪರಿಪೂರ್ಣ ವರದಿಯನ್ನು ಸೂಕ್ತ ಅಭಿಪ್ರಾಯ ಶಿಫಾರಸ್ಸಿನೊಂದಿಗೆ 30 ದಿನಗಳ ಒಳಗೆ ಸರಕಾರಕ್ಕೆ ಸಲ್ಲಿಸಲು ನಿರ್ದೇಶಿಸಲಾಗಿದೆ

ತನಿಖೆಗೆ ನಾಲ್ವರು ಐಎಎಸ್ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿದೆ. ಘನತ್ಯಾಜ್ಯ ನಿರ್ವಹಣೆ ಕಾಮಗಾರಿಗಳ ಆರೋಪಗಳ ಕುರಿತು ಹಿರಿಯ ಐಎಎಸ್ ಅಧಿಕಾರಿ ಉಜ್ವಲ್ ಕುಮಾರ್ ಘೋμï ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದ್ದು, ಲೋಕೋಪಯೋಗಿ ಇಲಾಖೆಯ ನಿವೃತ್ತ ಮುಖ್ಯ ಅಭಿಯಂತರರಾದ ದೊಡ್ಡಿಹಾಳ್, ಬಸವರಾಜ ಕೋಟಿ, ಕೆಪಿಟಿಸಿಎಲ್‍ನ ನಿವೃತ್ತ ಸಹಾಯಕ ಕಾರ್ಯಪಾಲಕ ಅಭಿಯಂತರ ಟಿ.ಪ್ರಭಾಕರ್ ಅನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಒಎಫ್‍ಸಿ ಕೇಬಲ್ ಅಳವಡಿಕೆಗೆ ಅನುಮತಿ ನೀಡುವ ಬಗ್ಗೆ ಐಎಎಸ್ ಅಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಿದ್ದು, ಲೋಕೋಪಯೋಗಿ ನಿವೃತ್ತ ಪ್ರಧಾನ ಅಭಿಯಂತರ ಪ್ರಭಾಕರ್ ಡಿ.ಹಮ್ಮಿಗೆ, ನಿವೃತ್ತ ಮುಖ್ಯ ಅಭಿಯಂತರ ಕೆ.ಮೋಹನ್, ನಿವೃತ್ತ ಕಾರ್ಯಪಾಲಕ ಅಭಿಯಂತರರಾದ ಬಸವರಾಜ್ ಶಂಸಿ ಮಠ್, ಎನ್.ಎಸ್.ಮೋಹನ್ ಸದಸ್ಯರಾಗಿದ್ದಾರೆ

ಬೃಹತ್ ನೀರುಗಾಲುವೆ ಕಾಮಗಾರಿಗಳು ಹಾಗೂ ಕೇಂದ್ರ, ವಲಯ, ನಗರ ಯೋಜನೆ ವಿಭಾಗಗಳಲ್ಲಿ ನಕ್ಷೆ ಮಂಜೂರಾತಿ, ಸ್ವಾಧಿನಾನುಭವ ಪತ್ರ ನೀಡಿರುವ ಕುರಿತು ಐಎಎಸ್ ಅಧಿಕಾರಿ ಪಿ.ಸಿ.ಜಾಫರ್ ಅಧ್ಯಕ್ಷತೆಯಲ್ಲಿ 3 ಸಮಿತಿ ರಚನೆಯಾಗಿದ್ದು, ಇಐಸಿಆರ್‍ನ ನಿವೃತ್ತ ಕಾರ್ಯದರ್ಶಿ ಎಚ್.ಬಿ.ಸಿದ್ದಗಂಗಪ್ಪ, ಲೋಕೋಪಯೋಗಿ ಇಲಾಖೆಯ ನಿವೃತ್ತ ಮುಖ್ಯ ಅಭಿಯಂತರ ಎಚ್.ಆರ್.ರಾಮಕೃಷ್ಣ, ನಿವೃತ್ತ ಕಾರ್ಯಪಾಲಕ ಅಭಿಯಂತರ ಮಲ್ಲೇಶ್ ಸಮಿತಿಯಲ್ಲಿದ್ದಾರೆ.

ಕೆರೆ ಅಭಿವೃದ್ಧಿ ಕಾಮಗಾರಿಗಳು ಸ್ಮಾರ್ಟ್‍ಸಿಟಿ ಯೋಜನೆಯಡಿಯಲ್ಲಿ ಕೈಗೊಂಡಿರುವ ಕಾಮಗಾರಿಗಳು ಹಾಗೂ ವಾರ್ಡ್ ಮಟ್ಟದ ಕಾಮಗಾರಿಗಳ ತನಿಖಾ ಸಮಿತಿಗೆ ಐಎಎಸ್ ಅಧಿಕಾರಿ ಡಾ.ವಿಶಾಲ್ ಅವರು ಅಧ್ಯಕ್ಷರಾಗಿದ್ದು, ಲೋಕೋಪಯೋಗಿ ಇಲಾಖೆಯ ನಿವೃತ್ತ ಮುಖ್ಯ ಅಭಿಯಂತರ ಬೀಸೇಗೌಡ, ನಿವೃತ್ತ ಕಾರ್ಯಪಾಲಕ ಅಭಿಯಂತರರಾದ ಎಚ್.ಪಿ.ಪ್ರಕಾಶ್, ಶ್ರೀಕಾಂತ್, ಎಚ್.ಕುಮಾರ್, ಜಿ.ಎಸ್. ಗೋಪಿನಾಥ್ ಸದಸ್ಯರಾಗಿದ್ದಾರೆ.

ತನಿಖಾ ವ್ಯಾಪ್ತಿಗೆ ಕೆಲವು ನಿಬಂಧನೆಗಳನ್ನು ವಿಧಿಸಲಾಗಿದೆ. ಕೈಗೆತ್ತಿಕೊಳ್ಳಲಾದ ಕಾಮಗಾರಿಗಳಿಗೆ ಅಗತ್ಯ ಶಾಸನಬದ್ಧ ಅನುಮತಿಗಳನ್ನು ಪಡೆಯಲಾಗಿದೆಯೇ, ಕೆಟಿಪಿಪಿ ಕಾಯ್ದೆ ಪಾಲನೆ ಮತ್ತು ಸರ್ಕಾರದ ಅನುಮತಿ ಇದೆಯೇ, ಟೆಂಡರ್ ಪ್ರಕ್ರಿಯೆಗಳಲ್ಲಿ ನಿಯಮಾವಳಿಗಳನ್ನು ತಿರುಚುವುದು ಅಥವಾ ಸಡಿಲಗೊಳಿಸುವ ಮೂಲಕ ಅವ್ಯವಹಾರ ನಡೆಸಿ ಅನರ್ಹರಿಗೆ ಟೆಂಡರ್ ನೀಡಲಾಗಿದೆಯೇ, ನಿರ್ದಿಷ್ಟ ಗುತ್ತಿಗೆದಾರರ ಹೆಸರಿನಲ್ಲಿ ಕಾರ್ಯಾದೇಶ ನೀಡಿ ಬೇರೆಯವರಿಗೆ ಬಿಲ್ ಪಾವತಿ ಮಾಡಿರುವುದು ಸೇರಿದಂತೆ 16 ಅಂಶಗಳನ್ನು ತನಿಖೆ ನಡೆಸಲು ಸೂಚಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News