ಪೊಲೀಸರ ವರ್ಗಾವಣೆಗೆ ನಿಯಮ ರಚನೆ : ಗೃಹ ಸಚಿವ ಜಿ.ಪರಮೇಶ್ವರ್
ಬೆಂಗಳೂರು : ಕಾನ್‍ಸ್ಟೇಬಲ್‍ಗಳ ಅಂತರ ಜಿಲ್ಲಾ ವರ್ಗಾವಣೆಗೆ ನಿಯಮಗಳನ್ನು ರೂಪಿಸಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರ್ಗಾವಣೆಯಲ್ಲಿ ಕಾನ್‍ಸ್ಟೇಬಲ್‍ಗಳ ವರ್ಗಾವಣೆಯಲ್ಲಿ ಈವರೆಗೆ ನಿಯಮಗಳಿರಲಿಲ್ಲ. ಆದರೆ, ಈ ಬಾರಿ ಪತಿ-ಪತ್ನಿ ವರ್ಗಾವಣೆಯನ್ನು ಮಾಡಲಾಗುವುದು. ಈ ಕುರಿತು ಪೊಲೀಸ್ ಮಹಾನಿರ್ದೇಶಕರೊಂದಿಗೆ ಚರ್ಚಿಸಿದ್ದೇನೆ. ಅಂತರ ಜಿಲ್ಲಾ ವರ್ಗಾವಣೆ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಲಾಗುವುದು ಎಂದು ತಿಳಿಸಿದರು.
ದರ್ಶನ್ ಪ್ರಕರಣಕ್ಕೆ ತೋರಿಸಿರುವ ಆಸಕ್ತಿ ವಾಲ್ಮಿಕಿ ನಿಗಮದ ಅಕ್ರಮದ ಪ್ರಕರಣಕ್ಕೆ ನೀಡುತ್ತಿಲ್ಲ ಎಂಬ ಬಿಜೆಪಿಯವರ ಆರೋಪಕ್ಕೆ ಪ್ರತಿಕ್ರಿಯಿಸಿ, ತಪ್ಪು ಮಾಡಿದವರ ರಕ್ಷಣೆಗೆ ಸರಕಾರ ನಿಂತಿಲ್ಲ. ತಪ್ಪು ಮಾಡಿದವರು ಯಾರೇ ಆಗಿದ್ದರೂ ಕಾನೂನು ಪ್ರಕಾರ ಕ್ರಮ ಜರುಗಲಿದೆ. ಅಧಿಕಾರಿಗಳು ಆಗಿರಬಹುದು ಅಥವಾ ರಾಜಕೀಯ ವ್ಯಕ್ತಿಗಳು ಇರಬಹುದು, ಯಾರೇ ಇದ್ದರೂ ಕ್ರಮ ಜರುಗಿಸುವುದು ಖಚಿತ ಎಂದರು.
ಈ ಪ್ರಕರಣದಲ್ಲಿ ಸಿಬಿಐನವರು ಬ್ಯಾಂಕ್ ಅಧಿಕಾರಿಗಳ ವಂಚನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ. ಇಲಾಖೆಯಲ್ಲಿನ ವಂಚನೆಯ ಕುರಿತು ಎಸ್‌ಐಟಿ ತನಿಖೆ ನಡೆಸುತ್ತಿದೆ. ಬಿಜೆಪಿಯವರು ಪ್ರತಿಭಟನೆ ಮಾಡಲಿ, ಸಿಎಂ ಮನೆ ಮುತ್ತಿಗೆ ಹಾಕಲಿ ಯಾರು ಬೇಡ ಅನ್ನುತ್ತಾರೆ. ತನಿಖೆ ವೇಳೆ ಸಚಿವರು, ಶಾಸಕರ ಮೇಲೆ ಆರೋಪಗಳನ್ನು ಮಾಡುವುದು ಸಹಜ. ತನಿಖೆಯ ವರದಿ ಆಧಾರದ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಇನ್ನೂ, ದೇಶದಲ್ಲಿ ಜಾರಿಯಾಗಿರುವ ಮೂರು ಹೊಸ ಅಪರಾಧ ಕಾನೂನುಗಳ ಪರಿಣಾಮದ ಬಗ್ಗೆ ಈಗಲೇ ಹೇಳಲು ಬರುವುದಿಲ್ಲ. ಆದರೆ, ಇಂದಿನಿಂದ ದಾಖಲಾಗುವ ಪ್ರಕರಣಗಳಿಗೆ ಹೊಸ ಕಾನೂನುಗಳು ಅನ್ವಯವಾಗಲಿವೆ. ಪ್ರಕರಣಗಳು ದಾಖಲಾದ ಬಳಿಕ ಕೋರ್ಟ್‍ನಲ್ಲಿ ಯಾವ ರೀತಿ ತೆಗೆದುಕೊಳ್ಳುತ್ತಾರೆ ಎಂಬುದನ್ನು ನೋಡಬೇಕು ಎಂದು ಅವರು ತಿಳಿಸಿದರು.