ವಂಚನೆ ಪ್ರಕರಣ: ಚೈತ್ರಾ ಸುದ್ದಿ ಪ್ರಕಟಿಸುವಾಗ ಕುಂದಾಪುರ ಹೆಸರು ಬಳಕೆಗೆ ಆಕ್ಷೇಪಿಸಿ ದಾವೆ

Update: 2023-09-22 19:02 GMT

ಬೆಂಗಳೂರು, ಸೆ.22: ಉದ್ಯಮಿಗೆ ಚುನಾವಣಾ ಟಿಕೆಟ್ ಕೊಡಿಸುವುದಾಗಿ ಹೇಳಿ 5 ಕೋಟಿ ರೂ.ಪಡೆದು ವಂಚಿಸಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಆರೋಪಿ ಚೈತ್ರಾ ಅವರಿಗೆ ಸಂಬಂಧಿಸಿದಂತೆ ಸುದ್ದಿ ಪ್ರಕಟ ಹಾಗೂ ಪ್ರಸಾರ ಮಾಡುವಾಗ ಕುಂದಾಪುರ ಹೆಸರು ಉಲ್ಲೇಖಿಸದಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರುವಂತೆ ಕೋರಿ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯಕ್ಕೆ ವ್ಯಕ್ತಿಯೊಬ್ಬರು ದಾವೆ ಹೂಡಿದ್ದಾರೆ.

ಕುಂದಾಪುರ ಮೂಲದ ಗಣೇಶ್ ಶೆಟ್ಟಿ ಮೂಲ ದಾವೆ ಹೂಡಿದ್ದಾರೆ. ದಾವೆಯು ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ. ಕುಂದಾಪುರವು ಉಡುಪಿ ಜಿಲ್ಲೆಯ ಪ್ರಮುಖ ಪಟ್ಟಣವಾಗಿದೆ. ಕದಂಬರು, ಚಾಲುಕ್ಯ, ಹೊಯ್ಸಳ, ವಿಜಯನಗರ ಅರಸರು ಕುಂದಾಪುರ ಪಟ್ಟಣದ ಸಾಂಸ್ಕೃತಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ದಾವೆಯಲ್ಲಿ ವಿವರಿಸಲಾಗಿದೆ.

ವಂಚನೆ ಆರೋಪದಲ್ಲಿ ಚೈತ್ರಾ ಹಾಗೂ ಇತರೆ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಚೈತ್ರ ಸಹ ಕುಂದಾಪುರದ ಮೂಲದವರಾಗಿದ್ದಾರೆ. ಆದರೆ, ಈ ವಂಚನೆ ಪ್ರಕರಣಕ್ಕೆ ಮಾಧ್ಯಮಗಳು ಚೈತ್ರಾ ಹೆಸರು ಬಳುಸುವಾಗ ಕುಂದಾಪುರ ಎಂಬುದಾಗಿ ಉಲ್ಲೇಖಿಸುತ್ತಿವೆ. ಇದರಿಂದ ಕುಂದಾಪುರ ಪಟ್ಟಣದ ಹೆಸರು ಮತ್ತು ಘನತೆಗೆ ಧಕ್ಕೆಯಾಗುತ್ತಿದೆ. ಕುಂದಾಪುರ ಎಂದು ಉಲ್ಲೇಖಿಸಿ ಮಾಧ್ಯಮಗಳು ಸುದ್ದಿ ಪ್ರಕಟಿಸುವುದು ಅವಹೇಳನಕಾರಿಯಾಗಿದೆ ಎಂದು ದಾವೆಯಲ್ಲಿ ಆಕ್ಷೇಪಿಸಲಾಗಿದೆ.

ಚೈತ್ರಾ ಬಗ್ಗೆ ಸುದ್ದಿ ಪ್ರಸಾರ ಮಾಡುವಾಗ ಕುಂದಾಪುರ ಎಂದು ಉಲ್ಲೇಖಿಸದಂತೆ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಿಗೆ ನಿರ್ಬಂಧ ಮಾಡಬೇಕು. ಈಗಾಗಲೇ ಕುಂದಾಪುರ ಹೆಸರು ಉಲ್ಲೇಖಿಸಿ ಪ್ರಸಾರ ಮಾಡಿರುವ ಸುದ್ದಿ, ವೀಡಿಯೋ, ಲೇಖನ, ಪೋಸ್ಟ್, ಲಿಂಕ್‌ಗಳನ್ನು ಶಾಶ್ವತವಾಗಿ ತೆಗೆದುಹಾಕುವಂತೆ ಸೂಚಿಸಬೇಕು ಎಂದು ದಾವೆದಾರ ಕೋರಿದ್ದಾರೆ. ದಾವೆದಾರ ಪರ ವಕೀಲ ಪವನ ಚಂದ್ರ ಶೆಟ್ಟಿ ವಕಾಲತ್ತು ಹಾಕಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News