ಬಿಜೆಪಿ ಟಿಕೆಟ್ ವಂಚನೆ ಪ್ರಕರಣ | ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹೋದರ ಗೋಪಾಲ್ ಜೋಶಿ ಬಂಧನ
ಹುಬ್ಬಳ್ಳಿ: ಹಿಂದಿನ ಲೋಕಸಭಾ ಚುನಾವಣೆಯಲ್ಲಿ ವಿಜಯಪುರ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ 2 ಕೋಟಿ ರೂ. ಪಡೆದು ವಂಚಿಸಿದ ಆರೋಪದಡಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹೋದರ ಗೋಪಾಲ್ ಜೋಶಿ ಅವರನ್ನು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಬೆಂಗಳೂರು ಪೊಲೀಸರು ಶನಿವಾರ ಬಂಧಿಸಿದ್ದಾರೆಂದು ವರದಿಯಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದ ಬೆಂಗಳೂರಿನ ಬಸವೇಶ್ವರನಗರ ಠಾಣಾ ಪೊಲೀಸರು, ಖಚಿತ ಮಾಹಿತಿ ಮೇರೆಗೆ ಕೊಲ್ಲಾಪುರದಲ್ಲಿ ಗೋಪಾಲ್ ಜೋಶಿ ಹಾಗೂ ಪುಣೆಯಲ್ಲಿ ಅವರ ಪುತ್ರ ಅಜಯ್ ಜೋಶಿಯನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಬೆಂಗಳೂರಿನ ವಿಜಯನಗರದ ಎಸಿಪಿ ಚಂದನ್ ಕುಮಾರ್ ನೇತೃತ್ವದ ಪೊಲೀಸರ ತಂಡ ಶನಿವಾರ ಮಧ್ಯಾಹ್ನ ಹುಬ್ಬಳ್ಳಿಗೆ ತೆರಳಿ, ಬಂಧಿತ ಆರೋಪಿಗಳಾದ ಗೋಪಾಲ್ ಜೋಶಿ ಹಾಗೂ ಅಜಯ್ ಜೋಶಿ ಅವರನ್ನು ಹುಬ್ಬಳ್ಳಿಯ ಕೇಶ್ವಾಪುರದ ಇಂದಿರಾ ಕಾಲನಿಯಲ್ಲಿರುವ ಅವರ ಮನೆಗೆ ಕರೆದುಕೊಂಡು ಹೋಗಿ ಪರಿಶೀಲನೆ ನಡೆಸಿದೆ. ಆ ಬಳಿಕ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಕೇಶ್ವಾಪುರ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.
ಇನ್ನು ಈ ಪ್ರಕರಣ ಸಂಬಂಧ ಸೋಮಶೇಖರ್ ನಾಯಕ್ ಹಾಗೂ ವಿಜಯಕುಮಾರಿ ಎಂಬುವರನ್ನು ಅ.18ರಂದು ಬಂಧಿಸಲಾಗಿತ್ತು. ದೂರು ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಗೋಪಾಲ್ ಜೋಶಿ, ಮಹಾರಾಷ್ಟ್ರದ ಕೊಲ್ಲಾಪುರದ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದರು. ಶನಿವಾರ ಬೆಳಗ್ಗೆ ಕೊಲ್ಲಾಪುರದ ಲಾಡ್ಜ್ ಗೆ ತೆರಳಿದ ಪೊಲೀಸರು ಅವರನ್ನು ಬಂಧಿಸಿ ಹುಬ್ಬಳಿಗೆ ಕರೆತಂದಿದ್ದಾರೆ.
ಇದೇ ವೇಳೆ ಪ್ರಕರಣದ ದೂರುದಾರರಾದ ಸುನೀತಾ ಚವ್ಹಾಣ್ ಅವರು ಹುಬ್ಬಳ್ಳಿಯ ಕೇಶ್ವಾಪೂರ ಪೊಲೀಸ್ ಠಾಣೆಗೆ ಆಗಮಿಸಿದ್ದು, ಪೊಲೀಸರ ವಿಚಾರಣೆಗೆ ಸಹಕರಿಸಿರುವುದಾಗಿ ತಿಳಿದುಬಂದಿದೆ.