ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಸಿ.ಎಂ. ಇಬ್ರಾಹಿಂ ಅವರನ್ನು ವಜಾಗೊಳಿಸಿದ ನಕಲಿ ಪತ್ರ ವೈರಲ್
ಬೆಂಗಳೂರು: ಈ ಕೂಡಲೇ ಸಿ.ಎಂ.ಇಬ್ರಾಹಿಂ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದೆ ಎನ್ನುವ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಹರಿದಾಡುತ್ತಿದೆ. ಆದರೆ ಈ ಪತ್ರ ನಕಲಿ ಎಂದು ತಿಳಿದು ಬಂದಿದೆ.
ಈ ನಕಲಿ ಪತ್ರ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಲೆಟರ್ ಹೆಡ್ ನಲ್ಲಿದೆ. ʼಈ ಕೂಡಲೇ ಜೆಡಿಎಸ್ ಅಧ್ಯಕ್ಷ ಸ್ಥಾನದಿಂದ ಸಿ ಎಂ ಇಬ್ರಾಹಿಂ ಅವರನ್ನು ವಜಾಗೊಳಿಸಲಾಗಿದೆʼ ಎಂದು ಪತ್ರದಲ್ಲಿ ಬರೆಯಲಾಗಿದೆ. ಅದರಲ್ಲಿ ದೇವೇಗೌಡರ ಸಹಿಯಂತೆ ನಕಲಿ ಮಾಡಲಾಗಿದೆ.
ʼʼಈ ತತ್ ಕ್ಷಣದಿಂದ ಎಚ್.ಡಿ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರನ್ನು ಈ ಕೂಡಲೇ ಪಕ್ಷದಿಂದ ಉಚ್ಚಾಟಿಸಲು ತೀರ್ಮಾನಿಸಲಾಗಿದೆʼʼ ಎಂದು ಉಲ್ಲೇಖಿಸಿ ಸಿಎಂ ಇಬ್ರಾಹಿಂ ಅವರು ಸಹಿ ಹಾಕಿರುವ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಇದು ಅಧಿಕೃತ ಪತ್ರವಲ್ಲ ಯಾರೋ ನಕಲಿಯಾಗಿ ಸೃಷ್ಟಿ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಪತ್ರ ಎಂದು ಆರೋಪಿಸಿ ಸ್ವತಃ ಸಿ.ಎಂ. ಇಬ್ರಾಹಿಂ ಅವರು ಇಲ್ಲಿನ ಜೆಸಿ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.