ಇನ್ಮುಂದೆ FSSAI ನೋಂದಣಿ, ಪರವಾನಗಿಯಿಲ್ಲದೇ ಎಲ್ಲೆಂದೆರಲ್ಲಿ ಶವರ್ಮ ಮಾಡುವಂತಿಲ್ಲ!

Update: 2024-06-30 14:02 GMT

ಸಾಂದರ್ಭಿಕ ಚಿತ್ರ | PC: Meta AI

ಬೆಂಗಳೂರು : ಎಲ್ಲ ಶವರ್ಮ ಆಹಾರ ತಯಾರಕರುಗಳು ತಮ್ಮ ಉದ್ದಿಮೆಗೆ ಎಫ್‍ಎಸ್‍ಎಸ್‍ಎಐ ನೋಂದಣಿ, ಪರವಾನಿಗೆಯನ್ನು ಪಡೆದುಕೊಂಡು ವ್ಯಾಪಾರದ ಸ್ಥಳದಲ್ಲಿ ಸಾರ್ವಜನಿಕರ ಗಮನಕ್ಕೆ ಬರುವಂತೆ ಪ್ರದರ್ಶಿಸಬೇಕು. ಅಲ್ಲದೆ, ಶವರ್ಮವನ್ನು ಪ್ರತಿದಿನ ಹೊಸದಾಗಿ ತಯಾರಿಸಿ ತಾಜಾ ಸ್ಥಿತಿಯಲ್ಲಿ ಮಾರಾಟ ಮಾಡಬೇಕು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಶವರ್ಮ ಆಹಾರ ಪದಾರ್ಥವನ್ನು ಸೇವಿಸಿ ಅಸ್ವಸ್ಥ ಕುರಿತ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿರುವುದರಿಂದ ಬಿಬಿಎಂಪಿ ವಲಯಗಳು, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೈಸೂರು, ತುಮಕೂರು, ಹುಬ್ಬಳ್ಳಿ, ಧಾರವಾಡ, ಮಂಗಳೂರು, ಬಳ್ಳಾರಿ ಮತ್ತು ಬೆಳಗಾವಿ ಜಿಲ್ಲೆಗಳ ಕಾರ್ಪೋರೇಷನ್ ವ್ಯಾಪ್ತಿಗಳಲ್ಲಿ ಮಾರಾಟ ಮಾಡಲಾಗುತ್ತಿರುವ ಶವರ್ಮದ ಆಹಾರ ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿತ್ತು.

ವಿಶ್ಲೇಷಣೆಗೆ ಒಳಪಡಿಸಲಾದ ಒಟ್ಟು 17 ಮಾದರಿಗಳಲ್ಲಿ 9 ಮಾದರಿಗಳು ಸುರಕ್ಷಿತ ಎಂದು, 8 ಮಾದರಿಗಳಲ್ಲಿ ಬ್ಯಾಕ್ಟಿರಿಯಾ ಮತ್ತು ಈಸ್ಟ್‌ಗಳು ಇದ್ದು ಅಸುರಕ್ಷಿತ ಎಂದು ವರದಿ ಬಂದಿದೆ. ಅಸುರಕ್ಷಿತ ಎಂದು ವರದಿಯಾಗಿರುವ ಆಹಾರ ಮಾದರಿಗಳ ತಯಾರಕರುಗಳ ವಿರುದ್ಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006, ನಿಯಮಗಳು 2011ರನ್ವಯ ಕಾನೂನು ಕ್ರಮವಹಿಸಲಾಗುತ್ತಿದೆ.

ಬ್ಯಾಕ್ಟಿರಿಯಾ ಮತ್ತು ಈಸ್ಟ್‌ಗಳು ಆಹಾರ ತಯಾರಿಕೆ ಸಂದರ್ಭದಲ್ಲಿನ ನೈರ್ಮಲ್ಯತೆಯ ಕೊರತೆ, ಧೀರ್ಘಕಾಲದ ಸಂಗ್ರಹಣೆ ಮತ್ತು ವಿತರಣೆಯ ಸಂದರ್ಭದಲ್ಲಿನ ನೈರ್ಮಲ್ಯತೆಯ ಕೊರತೆಯಿಂದಾಗಿ ಕಂಡುಬರಬಹುದಾಗಿರುತ್ತದೆ. ಸಂಬಂಧಿಸಿದಂತೆ ಎಲ್ಲ ಶವರ್ಮ ಆಹಾರ ತಯಾರಕರುಗಳು ಆಹಾರದ ತಯಾರಿಕೆ, ಸಂಗ್ರಹಣೆ ಮತ್ತು ವಿತರಣೆಯ ಸಂದರ್ಭದಲ್ಲಿ ಸಂಪೂರ್ಣ ನೈರ್ಮಲ್ಯತೆ ಮತ್ತು ಗುಣಮಟ್ಟವನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಶೆಡ್ಯೂಲ್ 4ರ ಅನುಸಾರವಾಗಿ ಕಾಪಾಡಿಕೊಳ್ಳಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News