ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಸಂಪೂರ್ಣ ಸಹಕಾರ: ಡಿ.ಕೆ.ಶಿವಕುಮಾರ್
ಬೆಳಗಾವಿ: ರಾಜ್ಯದಲ್ಲಿನ ಬರಗಾಲದ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಹಲವು ಸಮಸ್ಯೆಗಳ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಮಾಡಲು ನಾವು ಪೂರ್ಣ ಬೆಂಬಲ ನೀಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸೋಮವಾರ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ವಿರೋಧ ಪಕ್ಷದ ಶಾಸಕರಾಗಲಿ, ಆಡಳಿತ ಪಕ್ಷದ ಶಾಸಕರಾಗಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದರೆ ಸ್ಪಂದಿಸಲು ಸರಕಾರ ಸಿದ್ಧವಾಗಿದೆ. ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ಕಿತ್ತೂರು ಕರ್ನಾಟಕ, ಹಳೇ ಮೈಸೂರು ಕರ್ನಾಟಕ ಸೇರಿದಂತೆ ನಮ್ಮದು ಸಮಗ್ರ ಕರ್ನಾಟಕ. ವಿಧಾನಸಭೆಯಲ್ಲಿ ಚರ್ಚೆ ನಡೆಸಲು ನಾವು ಸದಾ ಸಹಕಾರ ನೀಡುತ್ತೇವೆ ಎಂದು ಹೇಳಿದರು.
ಬೆಳಗಾವಿ ಜಿಲ್ಲೆ ವಿಭಜನೆಗೆ ಕೂಗು ಕೇಳಿ ಬರುತ್ತಿದ್ದು, ಇಂದು ಕರೆ ನೀಡಲಾಗಿರುವ ಬಂದ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸದನದಲ್ಲಿ ಈ ವಿಚಾರದ ಬಗ್ಗೆ ಪ್ರಸ್ತಾವನೆ ಬಂದಾಗ ಖಂಡಿತ ಚಿಂತನೆ ಮಾಡುತ್ತೇವೆ ಎಂದರು.