ಸಿಎಂ ಸ್ಥಾನವನ್ನು ಡಿ.ಕೆ.ಶಿವಕುಮಾರ್‌ಗೆ ಬಿಟ್ಟುಕೊಡಿ : ಸಿದ್ದರಾಮಯ್ಯಗೆ ಚಂದ್ರಶೇಖರ ಸ್ವಾಮೀಜಿ ಮನವಿ
ಬೆಂಗಳೂರು: ‘ಈಗಾಗಲೇ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನವನ್ನು ಅನುಭವಿಸಿದ್ದು, ಇನ್ನು ಮುಂದೆ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಬೇಕು’ ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಮನವಿ ಮಾಡಿದ್ದಾರೆ.
ಗುರುವಾರ ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಾಡಪ್ರಭು ಕೆಂಪೇಗೌಡ ಪಾರಂಪಾರಿಕ ತಾಣ ಅಭಿವೃದ್ಧಿ ಪ್ರಾಧಿಕಾರ, ಬಿಬಿಎಂಪಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ‘ಕೆಂಪೇಗೌಡರ ಜಯಂತೋತ್ಸವ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಎಲ್ಲರೂ ಮುಖ್ಯಮಂತ್ರಿಗಳಾಗಿ ಅಧಿಕಾರವನ್ನು ಅನುಭವಿಸಿದ್ದಾರೆ. ನಮ್ಮ ಡಿ.ಕೆ.ಶಿವಕುಮಾರ್ ಒಬ್ಬರು ಮುಖ್ಯಮಂತ್ರಿ ಆಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ಸಿದ್ದರಾಮಯ್ಯ ಮನಸ್ಸು ಮಾಡಿದರೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲು ಸಾಧ್ಯವಿದೆ. ಇಲ್ಲದಿದ್ದರೆ, ಸಿಎಂ ಆಗಲು ಆಗುವುದಿಲ್ಲ. ಹೀಗಾಗಿ ಸಿದ್ದರಾಮಯ್ಯ ಅವರೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯಾಗಿ ಮಾಡಿ’ ಎಂದು ಶ್ರೀ ಚಂದ್ರಶೇಖರ ಸ್ವಾಮಿ ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
‘ಕೆಂಪೇಗೌಡರು ಕಟ್ಟಿರುವಂತಹ ಈ ಬೆಂಗಳೂರು ಯಾವಾಗಲೂ ಸ್ಥಿರಸ್ಥಾಯಿಯಾಗಿ ಇರಬೇಕು. ಹಿಂದೆ ಕೆಲವರು ಬೆಂಗಳೂರನ್ನು ಭಾಗ ಮಾಡಬೇಕು ಎಂದಾಗ, ನಾವು ಹೋರಾಟ ಮಾಡಿ ನಿಲ್ಲಿಸಿದ್ದೇವೆ. ಇದೀಗ ಮತ್ತೊಮ್ಮೆ ಭಾಗ ಮಾಡಬೇಕು ಎಂದು ಹೇಳುತ್ತಾರೆ. ಬೆಂಗಳೂರನ್ನು ಯಾವುದೇ ಕಾರಣಕ್ಕೂ ಇಬ್ಬಾಗ ಮಾಡಲು ಹೋಗಬೇಡಿ ಎಂದು ಅವರು ಸಲಹೆ ನೀಡಿದರು.
ಹಾಗಾದರೆ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎಂದು ಭಾಗ ಮಾಡಿ, ಆಗ ಉತ್ತರ ಕರ್ನಾಟಕದವರು ಚನ್ನಾಗಿ ಅಭಿವೃದ್ಧಿ ಹೊಂದುತ್ತಾರೆ. ಏಕೆಂದರೆ ಅಲ್ಲಿರುವವರೆಲ್ಲರೂ ಬೆಂಗಳೂರಿಗೆ ಬಂದು ಸೇರುತ್ತಿದ್ದಾರೆ. ಅಲ್ಲಿ ಅಭಿವೃದ್ಧಿ ಆಗುತ್ತಿಲ್ಲ. ಹೀಗಾಗಿ ಬೆಂಗಳೂರನ್ನು ಯಾವುದೇ ಕಾರಣಕ್ಕೆ ಭಾಗಗಳಾಗಿ ಮಾಡಬೇಡಿ ಎಂದು ಅವರು ಒತ್ತಾಯಿಸಿದರು.
ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ, ಮಹಾಸಂಸ್ಥಾನ ಮಠದ ನಂಜಾವಧೂತ ಸ್ವಾಮೀಜಿ, ಸಚಿವರಾದ ಶಿವರಾಜ್ ತಂಗಡಗಿ, ಕೃಷ್ಣಬೈರೇಗೌಡ, ಶಾಸಕ ರಿಝ್ವಾನ್ ಅರ್ಶದ್, ಮೇಲ್ಮನೆ ಸದಸ್ಯರಾದ ಸಲೀಂ ಅಹ್ಮದ್, ರಾಮೋಜಿ ಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸಿದ್ದರಾಮಯ್ಯ ಹೇಳಿದ್ದೇನು?
ಡಿ.ಕೆ.ಶಿವಕುಮಾರ್‌ಗೆ ಸಿಎಂ ಸ್ಥಾನ ಕೊಡಬೇಕೆಂಬ ಸ್ವಾಮೀಜಿಯ ಮನವಿ ಸಂಬಂಧ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ‘ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆಯೇ, ಹೊರತು ಸ್ವಾಮೀಜಿಗಳು ಅಲ್ಲ. ಹೈಕಮಾಂಡ್ ಹೇಳಿದಂತೆ ಎಲ್ಲರೂ ನಡೆದುಕೊಳ್ಳಬೇಕು’ ಹೇಳಿದರು.