ಜಾಗತಿಕ ಹೂಡಿಕೆದಾರರ ಸಮಾವೇಶ: ಹೊಸದಿಲ್ಲಿಗೆ ಸಚಿವ ಎಂ.ಬಿ.ಪಾಟೀಲ್ ಪಯಣ

Update: 2024-09-09 17:38 GMT

ಬೆಂಗಳೂರು: ಮುಂಬರುವ ಫೆಬ್ರವರಿ 12ರಿಂದ 14ರ ವರೆಗೆ ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯಲಿರುವ ಹಿನ್ನೆಲೆಯಲ್ಲಿ ನಾನಾ ದೇಶಗಳ ರಾಯಭಾರಿಗಳು ಮತ್ತು ಔದ್ಯಮಿಕ ಸಂಘಟನೆಗಳನ್ನು ಭೇಟಿ ಮಾಡಲು ಮತ್ತು ನಿಗದಿತ ರೋಡ್ ಶೋನಲ್ಲಿ ಪಾಲ್ಗೊಳ್ಳಲು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸೋಮವಾರ ಸಂಜೆ ಹೊಸದಿಲ್ಲಿಗೆ ಪಯಣ ಬೆಳೆಸಿದರು.

ಅಲ್ಲಿ ಅವರು ಸೆ.10 ಮತ್ತು 11ರಂದು ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಜತೆಗೆ ಮಂಗಳವಾರ ಸಂಜೆ 4ಕ್ಕೆ ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಸಂಜೆ 5ಕ್ಕೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವು ಪ್ರಮುಖರನ್ನು ಭೇಟಿಯಾಗಿ, ಮಾತುಕತೆ ನಡೆಸಲಿದ್ದಾರೆ.

ತಮ್ಮ ಎರಡು ದಿನಗಳ ದಿಲ್ಲಿ ಕಾರ್ಯಕ್ರಮದಲ್ಲಿ ಎಂ.ಬಿ.ಪಾಟೀಲ್, ಸಿಂಗಾಪುರ್ ಹೈಕಮೀಷನರ್, ಜರ್ಮನಿ ರಾಯಭಾರಿ, ಅಮೆರಿಕದ ಯುಎಸ್ ಚೇಂಬರ್ ಆಫ್ ಕಾಮರ್ಸ್, ಇಂಡೋ-ಅಮೆರಿಕ ಬಿಜಿನೆಸ್ ಕೌನ್ಸಿಲ್, ಟಾಯ್ ಜೋನ್ ಮುಂತಾದ ಸಂಘಟನೆಗಳ ಉನ್ನತ ಮಟ್ಟದ ಪ್ರತಿನಿಧಿಗಳ ಜೊತೆ ಜಾಗತಿಕ ಹೂಡಿಕೆದಾರರ ಸಮಾವೇಶದ ಹಿನ್ನೆಲೆಯಲ್ಲಿ ಮಾತನಾಡಲಿದ್ದಾರೆ.

ಸೆ.11ರಂದು ಸಿಐಐ ಜಾಗತಿಕ ಹೂಡಿಕೆದಾರರ ಸಮಾವೇಶದ ಅಂಗವಾಗಿ ಏರ್ಪಡಿಸಿರುವ ರೋಡ್ ಶೋನಲ್ಲಿ ಪಾಲ್ಗೊಳ್ಳಲಿರುವ ಎಂ.ಬಿ.ಪಾಟೀಲ್, ಬಳಿಕ ಭಾರತ್ ಸೆಮಿ ಸಿಸ್ಟಮ್ಸ್ ಏರ್ಪಡಿಸಿರುವ `ಕರ್ನಾಟಕದಲ್ಲಿ ಹೂಡಿಕೆ ಅವಕಾಶಗಳು’ ಕುರಿತ ವಿಚಾರ ಸಂಕಿರಣ ಸೇರಿದಂತೆ ಇನ್ನೂ ಅನೇಕ ಚಟುವಟಿಕೆಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News