ಜಾಗತಿಕ ಹೂಡಿಕೆದಾರರ ಸಮಾವೇಶ : ಆಸ್ಟ್ರೇಲಿಯಾ, ಜರ್ಮನಿ, ದಕ್ಷಿಣ ಕೊರಿಯಾಗೆ ರಾಜ್ಯದ ಆಹ್ವಾನ
ಹೊಸದಿಲ್ಲಿ : ಮುಂಬರುವ ಫೆಬ್ರವರಿ 12ರಿಂದ 14ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ, ಜರ್ಮನಿ ಮತ್ತು ದಕ್ಷಿಣ ಕೊರಿಯಾ ದೇಶಗಳ ಹೈಕಮಿಷನರುಗಳನ್ನು ಭೇಟಿ ಮಾಡಿ, ಆಹ್ವಾನಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಉದ್ದೇಶಿತ ಸಮಾವೇಶಕ್ಕೆ ಪೂರ್ವಭಾವಿಯಾಗಿ ಎರಡು ದಿನಗಳ ದಿಲ್ಲಿ ಪ್ರವಾಸ ಕೈಗೊಂಡಿದ್ದ ಅವರು, ಬುಧವಾರ ಇಲ್ಲಿನ ಕರ್ನಾಟಕ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ತಮ್ಮ ಕಾರ್ಯಕ್ರಮದ ಮೊದಲ ದಿನ ಅವರು ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ರಾಜ್ಯದ ಕೈಗಾರಿಕಾ ವಲಯದ ಬೆಳವಣಿಗೆಗೆ ಕೇಂದ್ರದ ನೆರವನ್ನು ಕೋರಿದ್ದರು. ಜತೆಗೆ ಸಿಂಗಪುರ್ ಹೈಕಮಿಷನರ್ ಅವರನ್ನು ಭೇಟಿ ಮಾಡಿ, ಹೂಡಿಕೆದಾರರ ಸಮಾವೇಶಕ್ಕೆ ಆಹ್ವಾನಿಸಿರುವುದಾಗಿ ಹೇಳಿದರು.
ಅಲ್ಲದೆ, ಟಾಯ್ ಝೋನ್, ಎಎಂಡಿ, ವಾಟ್ಲೋ, ಭಾರತ್ ಸೆಮಿ ಸಿಸ್ಟಮ್ಸ್, ಥರ್ಡ್-ಐಟೆಕ್, ಆ್ಯಂಬರ್ ಎಂಟಪ್ರ್ರೈಸಸ್, ಎಚ್‍ಎಂಇಎಲ್ ಸೇರಿದಂತೆ ಹಲವು ಉದ್ಯಮ ಕಂಪನಿಗಳ ಪ್ರಮುಖರನ್ನು ಕಂಡು, ಅವರನ್ನೂ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಆಮಂತ್ರಿಸಲಾಗಿದೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.
ಎರಡನೇ ದಿನವಾದ ಇಂದು ಆಸ್ಟ್ರೇಲಿಯಾ ಹೈಕಮಿಷನರ್ ಫಿಲಿಫ್ ಗ್ರೀನ್ ಅವರೊಂದಿಗೆ ಶಿಕ್ಷಣ, ವೈಮಾಂತರಿಕ್ಷ, ಜೈವಿಕ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳ ಪರಸ್ಪರ ಸಹಕಾರ ಕುರಿತು ಮಾತುಕತೆ ನಡೆಸಿ, ಬಂಡವಾಳ ಹೂಡಿಕೆಗೆ ಸಂಪೂರ್ಣ ಬೆಂಬಲ ಕೊಡುವುದಾಗಿ ತಿಳಿಸಿರುವುದಾಗಿ ಅವರು ಹೇಳಿದರು.
ಜರ್ಮನಿ ಮಿಷನ್ ಉಪಮುಖ್ಯಸ್ಥ ಜಾರ್ಜ್ ಎಂಜ್ವೀಲರ್ ಅವರೊಂದಿಗಿನ ಭೇಟಿಯಲ್ಲಿ ಮರುಬಳಕೆ ಮಾಡಬಹುದಾದ ಇಂಧನ, ಹವಾಮಾನ ಬದಲಾವಣೆ ಮತ್ತು ಸುಸ್ಥಿರ ಅಭಿವೃದ್ಧಿ, ಎಂಜಿನಿಯರಿಂಗ್ ಮತ್ತು ರಾಸಾಯನಿಕಗಳ ಉತ್ಪಾದನೆ ಇತ್ಯಾದಿ ಕ್ಷೇತ್ರಗಳಲ್ಲಿ ಸಹಕಾರ ಸಾಧ್ಯತೆ ಕುರಿತು ವಿಚಾರ ವಿನಿಮಯ ನಡೆಸಲಾಯಿತು ಎಂದು ಎಂ.ಬಿ.ಪಾಟೀಲ್ ತಿಳಿಸಿದರು.
ದಕ್ಷಿಣ ಕೊರಿಯಾದ ರಾಯಭಾರಿ ಚಾಂಗ್ ಜೇಬಾಕ್ ಅವರನ್ನು ಕಂಡ ಸಚಿವರು, ತಂತ್ರಜ್ಞಾನ, ನಾವೀನ್ಯತೆ, ಎಲೆಕ್ಟ್ರಾನಿಕ್ಸ್, ವಾಹನ ತಯಾರಿಕೆ ಮತ್ತು ಮಶೀನ್ ಟೂಲ್ ಕ್ಷೇತ್ರಗಳಲ್ಲಿ ರಾಜ್ಯದಲ್ಲಿ ಹೂಡಿಕೆಗೆ ಇರುವ ಯಥೇಚ್ಛ ಅವಕಾಶಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಆಯುಕ್ತೆ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.