ಯಾವುದೇ ಕ್ಷಣದಲ್ಲೂ ಸರಕಾರ ಬೀಳಬಹುದು: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

Update: 2024-07-12 13:58 GMT

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯರ ಸರಕಾರ ತುಘಲಕ್ ದರ್ಬಾರ್ ಮಾಡಲು ಮುಂದಾಗಿದೆ. ಇದಕ್ಕೆ ಬಿಜೆಪಿ ಮತ್ತು ಪಕ್ಷದ ಕಾರ್ಯಕರ್ತರು ಹೆದರುವ ಪ್ರಶ್ನೆಯೇ ಇಲ್ಲ. ಸರಕಾರದ ಪಾಪದ ಕೊಡ ತುಂಬಿದೆ. ಯಾವುದೇ ಕ್ಷಣದಲ್ಲೂ ಸರಕಾರ ಬೀಳಬಹುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಡಾ ಹಗರಣವನ್ನು ಖಂಡಿಸಿ ಮೈಸೂರು ಚಲೋ ನಡೆಸುತ್ತಿರುವ ಕಾರ್ಯಕರ್ತರನ್ನು ಮತ್ತು ಮುಖಂಡರನ್ನು ಬಂಧಿಸುವ ಪ್ರಯತ್ನ ಖಂಡನೀಯ. ಕಾರ್ಯಕರ್ತರ ಬಂಧನದ ಮೂಲಕ ರಾಜ್ಯಾದ್ಯಂತ ಬೆಂಕಿ ಹಚ್ಚಲು ನೀವೇ ಕಾರಣವಾಗುತ್ತೀರಿ ಎಂದು ಎಚ್ಚರಿಕೆ ನೀಡಿದರು.

ಮಾಜಿ ಸಚಿವ ನಾಗೇಂದ್ರ ಈ.ಡಿ. ವಶಕ್ಕೆ ಪಡೆದಿದ್ದಾರೆ. ಕಾಂಗ್ರೆಸ್ಸಿನ ಪಾಪದ ಕೊಡ ತುಂಬಿದೆ. ದಲಿತರ ಹಣ ಲೂಟಿ ಮಾಡಿದ್ದೀರಿ. ಅಲ್ಲದೆ ದಲಿತರು, ಬಡವರಿಗೆ ಮೀಸಲಿಟ್ಟ ನಿವೇಶನಗಳನ್ನು ಲಪಟಾಯಿಸಿದ್ದೀರಿ. ಇದನ್ನು ಸಿಬಿಐ ತನಿಖೆಗೆ ಕೊಡಬೇಕಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಅವರು ಆಗ್ರಹಿಸಿದರು.

ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ. ಮುಖ್ಯಮಂತ್ರಿಗಳು ಪ್ರಾಮಾಣಿಕರಿದ್ದರೆ, ಮುಡಾದಲ್ಲಿ ಭ್ರಷ್ಟಾಚಾರ ಆಗಿಲ್ಲ ಎನ್ನುವುದಾದರೆ, ಜಿಲ್ಲಾಧಿಕಾರಿಗಳ ವರದಿಯ ಬಳಿಕವೂ ಭ್ರಷ್ಟಾಚಾರ ಆಗಿಲ್ಲವೆಂದಾದರೆ ನಿಷ್ಪಕ್ಷಪಾತ ತನಿಖೆ ನಡೆಸಿ, ಇದನ್ನು ಸಿಬಿಐ ತನಿಖೆಗೆ ಕೊಡಲಿ. ಬಿಜೆಪಿ ಹೋರಾಟ ಹತ್ತಿಕ್ಕುವುದು ಅಕ್ಷಮ್ಯ ಅಪರಾಧ ಎಂದು ಟೀಕಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News