ಧರಣಿನಿರತರ ಹಕ್ಕೊತ್ತಾಯಗಳ ಬಗ್ಗೆ ಸರಕಾರ ಚರ್ಚಿಸಲು ಸಿದ್ಧ: ಸಚಿವ ಕೃಷ್ಣ ಬೈರೇಗೌಡ

Update: 2023-11-27 16:06 GMT

ಬೆಂಗಳೂರು: ನಗರದ ಫ್ರೀಡಂ ಪಾರ್ಕ್‍ನಲ್ಲಿ ಸಂಯುಕ್ತ ಕಿಸಾನ್ ಮೋರ್ಚ್ ಮತ್ತು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಆಯೋಜಿಸಿದ್ದ ಹೋರಾಟದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ತಿಳಿದಿದ್ದು, ಧರಣಿನಿರತರ ಹಕ್ಕೊತ್ತಾಯಗಳ ಬಗ್ಗೆ ಚರ್ಚಿಸಲು ಸರಕಾರ ಸಿದ್ಧವಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಸೋಮವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಸಂಯುಕ್ತ ಕಿಸಾನ್ ಮೋರ್ಚ್ ಮತ್ತು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಆಯೋಜಿಸಿದ್ದ ‘72 ಗಂಟೆಗಳು ದುಡಿಯುವ ಜನರ ಮಹಾ ಧರಣಿ ಹಾಗೂ ರಾಜಭವನ್ ಚಲೋ’ನ ಧರಣಿಗೆ ಬಂದು ಮನವಿ ಪತ್ರವನ್ನು ಸ್ವೀಕರಿಸಿ ಅವರು ಮಾತನಾಡಿದರು.

ಹೋರಾಟಗಾರರು 18 ಹಕ್ಕೊತ್ತಾಯಗಳನ್ನು ನಮ್ಮ ಸರಕಾರದ ಮುಂದಿಟ್ಟಿದ್ದಾರೆ. ಇವುಗಳಲ್ಲಿ ಮೂರು ಕಂದಾಯ ಇಲಾಖೆಗೆ ಸಂಬಂಧಿಸಿದ ವಿಚಾರಗಳೂ ಇವೆ. ಮಂಗಳವಾರ ಸಚಿವರ ಸಭೆ ಇದೆ. ಅಲ್ಲಿ, ಇಲ್ಲಿನ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಮಯ ನಿಗದಿ ಮಾಡಿಸಲು ನಾನು ಒತ್ತುಕೊಡುತ್ತೇನೆ. ಶೀಘ್ರದಲ್ಲೇ ಹೋರಾಟಗಾರರೊಂದಿಗಿನ ಸಭೆಯನ್ನು ನಿಗದಿ ಮಾಡಿಸುತ್ತೇನೆ ಎಂದು ಅವರು ಹೇಳಿದರು.

ಕಾರ್ಮಿಕರು, ಭೂಮಿ ರಹಿತರು ಸೇರಿದಂತೆ ನಾನಾ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಬರ ಪರಿಹಾರಕ್ಕೆ ಅನುದಾನ ಕೇಂದ್ರದಿಂದ ಬಂದಿಲ್ಲ. ಅದರ ಬಗ್ಗೆ ಚರ್ಚಿಲು ಮುಖ್ಯಮಂತ್ರಿಗಳು ದೆಹಲಿಗೆ ತರಳಲಿದ್ದಾರೆ. ಡಿ.4ರಿಂದ ಅಧಿವೇಶನವೂ ಇದೆ. ಈ ಎಲ್ಲದರ ನಡುವೆ ಸಮಯವನ್ನು ನೋಡಿಕೊಂಡು, ಸಭೆ ನಿಗದಿ ಮಾಡಿಸುತ್ತೇನೆ. ಎಲ್ಲರ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತೇವೆ ಎಂದು ಅವರು ಹೇಳಿದರು.

ಹೋರಾಟಗಾರರು ಮುಂದಿಟ್ಟಿರುವ ಎಲ್ಲ ವಿಷಯಗಳು ಶ್ರಮಿಕರು, ಬಡವರ ಪರವಾಗಿವೆ. ಅವುಗಳೆಲ್ಲವನ್ನೂ ನಾವು ಈಡೇರಿಸಲು ಸಾಧ್ಯವಾಗುತ್ತದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ, ಬಡವರು, ರೈತರು, ಕಾರ್ಮಿಕರ ಪರವಾಗಿ ನಡೆಯುತ್ತಿರುವ ಹೋರಾಟ ಸ್ವಾಗತಾರ್ಹ. ಸಾಮಾನ್ಯ ಜನರ ವಿಷಯಗಳು ಚರ್ಚೆಯಾಗಬೇಕು. ಜೀವನಾಧಾರ ವಿಷಯಗಳ ಬಗ್ಗೆ ಚರ್ಚೆ ನಡೆಯಬೇಕು. ಅದಕ್ಕಾಗಿ, ಎಲ್ಲ ಹಕ್ಕತ್ತಾಯಗಳ ಬಗ್ಗೆ ಖಂಡಿತವಾಗಿಯೂ ಚರ್ಚಿಸುತ್ತೇನೆ. ಸಭೆ ಕರೆಯುತ್ತೇವೆ ಎಂದು ಕೃಷ್ಣ ಬೈರೇಗೌಡ ಹೇಳಿದರು.




 


Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News