ರಾಜ್ಯದಲ್ಲಿ ಪ್ರವಾಸಿಗರ ಅನುಕೂಲಕ್ಕೆ ಟೂರಿಸ್ಟ್ ಪೊಲೀಸ್ ವ್ಯವಸ್ಥೆ ಜಾರಿಗೆ ಸರಕಾರ ಚಿಂತನೆ
ಮೈಸೂರು: ರಾಜ್ಯದಲ್ಲಿರುವ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಣೆ ಮಾಡಲು ಬರುವ ಪ್ರವಾಸಿಗರ ಅನುಕೂಲಕ್ಕಾಗಿ ರಾಜ್ಯಾದ್ಯಂತ ಟೂರಿಸ್ಟ್ ಪೊಲೀಸ್ ವ್ಯವಸ್ಥೆ ಜಾರಿ ಮಾಡಲು ಚಿಂತನೆ ನಡೆಸಲಾಗುತ್ತಿದೆ ಎಂದು ಕಾನೂನು ನ್ಯಾಯ ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಪರಂಪರೆಯನ್ನು ವಿಶ್ವ ಪ್ರತೀಕ. ಚಾಮುಂಡಿ ಬೆಟ್ಟದ ಅಭಿವೃದ್ಧಿ ಕುರಿತು ಒಂದಷ್ಟು ಸಲಹೆಗಳನ್ನು ನೀಡಲಾಗಿದೆ. ಪ್ರಸಾದ್ ಯೋಜನೆಯಡಿ ಚಾಮುಂಡಿ ಬೆಟ್ಟದ ಅಭಿವೃದ್ಧಿ ಮಾಡಲಾಗುವುದು. ವಿಶ್ವವಿಖ್ಯಾತ ಮೈಸೂರು ದಸರಾಗೆ ಇನ್ನು 90 ದಿನ ಇದ್ದು, ದಸರಾ ತಯಾರಿ ಆರಂಭವಾಗಿದೆ. ದಸರಾ ಮಹೋತ್ಸವಕ್ಕೆ ನಮ್ಮ ಇಲಾಖೆಯಿಂದ ಆಗಬೇಕಾದ ವ್ಯವಸ್ಥೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ದಸರಾ ಪ್ರಾಧಿಕಾರ ರಚನೆ ಬಗೆಗೆ ಮುಂಬರುವ ದಿನಗಳಲ್ಲಿ ಚರ್ಚಿಸಲಾಗುವುದು. ಮೈಸೂರಿಗೆ ಒಂದು ವರ್ಷಕ್ಕೆ 50 ಲಕ್ಷ ಜನ ಪ್ರವಾಸಿಗರು ಬರುತ್ತಾರೆ. ಮುಂದಿನ ದಿನಗಳಲ್ಲಿ ಪ್ರವಾಸಿಗರ ಸ್ನೇಹಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಅವರು ತಿಳಿಸಿದರು.
ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ 2020-21ರ ವೇಳೆಯಲ್ಲಿ 61 ಕೋಟಿ ರೂ ವ್ಯವಹಾರ ನಡೆಸಿದ್ದು, 2022-23ಕ್ಕೆ 111 ಕೋಟಿ ರೂ ವ್ಯವಹಾರ ವಿಸ್ತಾರವಾಗಿದೆ. ಹಿರಿಯ ನಾಗರಿಕರಿಗೆ ಕಾಲೇಜು ವಿದ್ಯಾರ್ಥಿಗಳಿಗೆ ಅಂದರೆ ಪಿಯುಸಿ ಮತ್ತು ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿಶೇಷ ಪ್ಯಾಕೇಜ್ ನೀಡುವ ಮೂಲಕ ಶೇ.40 ರಷ್ಟು ಬರುತ್ತಿರುವ ಪ್ರವಾಸಿಗರನ್ನು ಶೇ.70 ರಷ್ಟಕ್ಕೆ ಹೆಚ್ಚಿಸಲು ಯೋಜನೆ ರೂಪಿಸಲಾಗುವುದು. ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಒಂದು ಪಾಸ್ ತೆಗೆದುಕೊಂಡು ಹಲವು ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
<< 'ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆಗಳು ಜಾರಿಯಾಗಿವೆ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಮಾಡಿಕೊಟ್ಟ ಬಳಿಕ ಪ್ರವಾಸಿ ತಾಣಗಳಿಗೆ ಭೇಟಿ ಕೊಡುವವರ ಸಂಖ್ಯೆ ಹೆಚ್ಚಳವಾಗಿದೆ. ಹಾಗಾಗಿ ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು'
ಎಚ್.ಕೆ.ಪಾಟೀಲ್, ಪ್ರವಾಸೋದ್ಯಮ ಸಚಿವ.