‘ಸಕಾಲ’ ಜನರ ಮನೆ ಬಾಗಿಲಿಗೆ ವಿಳಂಬವಿಲ್ಲದೆ ಸರಕಾರಿ ಸೇವೆ ಒದಗಿಸಬೇಕು: ಸಚಿವ ಕೃಷ್ಣ ಬೈರೇಗೌಡ

Update: 2024-01-10 14:49 GMT

ಬೆಂಗಳೂರು: ‘ಸಕಾಲ’ ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಸರಕಾರಿ ಸೇವೆಗಳನ್ನು ಅಧಿಕಾರಿಗಳು ವಿಳಂಬವಿಲ್ಲದೆ ಜನರ ಮನೆ ಬಾಗಿಲಿಗೆ ತಲುಪಿಸಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಬುಧವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ʼಸಕಾಲʼ ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಸರಕಾರ ಪ್ರತಿಯೊಬ್ಬರ ಮನೆ ಬಾಗಿಲಿಗೆ ತಲುಪಲು ಇರುವ ಏಕೈಕ ಮಾರ್ಗ ಸಕಾಲ. ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು ಎಂದರು.

ಜನರಿಗೆ ವಿಳಂಬವಿಲ್ಲದೆ ಎಲ್ಲ ಸೇವೆಗಳೂ ಲಭ್ಯವಾಗುವಂತಿರಬೇಕು ಎಂಬುದೆ ಸರಕಾರದ ಉದ್ದೇಶ. ಆದರೆ, ಕೆಲವು ಸೇವೆಗಳು ವಿಳಂಬವಾಗುತ್ತಿರುವುದು ಸರಿಯಲ್ಲ. ಸಕಾಲ ಸೇವೆಯಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಆದರೆ, ಸುಧಾರಣೆಯಾಗಬೇಕಾದ್ದು ಇನ್ನೂ ಬಹಳಷ್ಟಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಕಾಲ ಸೇವೆ ವಿಳಂಬವಾಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ನಮಗೆ ವರ ಕೊಟ್ಟು ಇಲ್ಲಿ ಕೂರಿಸಿದವರನ್ನೆ ಮನೆಯ ಹೊರಗೆ ಕೂರಿಸಿ ಸತಾಯಿಸುವ ಕೆಲಸ ಆಗಬಾರದು. ಸಕಾಲ ಸೇವೆಯನ್ನು ಅಧಿಕಾರಿಗಳು ನಾಮಕಾವಸ್ತೆಯಂತೆ ಹಗುರವಾಗಿ ತೆಗೆದುಕೊಳ್ಳಬಾರದು ಎಂದು ಅವರು ಕಿವಿಮಾತು ಹೇಳಿದರು.

‘ಸಕಾಲ’ವೂ ಡಿಜಿಟಲ್: ಕಂದಾಯ ಇಲಾಖೆಯಲ್ಲಿ ಈಗಾಗಲೆ ಎಲ್ಲ ಸೇವೆಗಳನ್ನು ಆನ್‍ಲೈನ್ ಮೂಲಕವೇ ನೀಡಲಾಗುತ್ತಿದೆ. ಸಕಾಲ ಸೇವೆಯನ್ನೂ ಏಕೆ ಆನ್‍ಲೈನ್ ಮೂಲಕ ನೀಡಬಾರದು? ಎಂದು ಪ್ರಶ್ನಿಸಿದ ಕೃಷ್ಣ ಬೈರೇಗೌಡ, ಸಮಾಜದಲ್ಲಿ ಡಿಜಿಟಲ್ ಸಾಕ್ಷರತೆ ಹೆಚ್ಚುತ್ತಿದೆ. ಹೀಗಾಗಿ ಆನ್‍ಲೈನ್ ಸೇವೆ ಜನರಿಗೆ ಸಮಸ್ಯೆ ಆಗುತ್ತಿದೆ ಎಂಬುದು ಸುಳ್ಳು ಹೇಳಿಕೆ. ಕಂದಾಯ ಇಲಾಖೆಯಲ್ಲೆ ಇದು ಸಾಧ್ಯವಾಗಿದೆ ಎಂದ ಮೇಲೆ ಉಳಿದ ಕಡೆ ಏಕೆ ಸಾಧ್ಯವಿಲ್ಲ. ಇನ್ನು ಮುಂದೆ ಸಕಾಲ ಅರ್ಜಿಯನ್ನೂ ಆನ್‍ಲೈನ್ ಮೂಲಕವೆ ಸ್ವೀಕರಿಸಿ ಎಂದು ಸಲಹೆ ನೀಡಿದರು.

ಪ್ರತಿ ಹಳ್ಳಿಯಲ್ಲೂ ಈಗ ಸೈಬರ್ ತಾಣಗಳಿವೆ. ಸರಕಾರದ ಗ್ರಾಮ-1 ಸೇವೆಯನ್ನು ಮತ್ತಷ್ಟು ವಿಸ್ತರಿಸುವ ಮತ್ತು ಮೊಬೈಲ್‍ಗೂ ನೀಡುವ ಉದ್ದೇಶ ಸರಕಾರಕ್ಕಿದೆ. ಇದು ಸಾಧ್ಯವಾದರೆ ಜನ ಮೊಬೈಲ್ ಮೂಲಕವೆ ಸಕಾಲ ಅರ್ಜಿ ಸಲ್ಲಿಸಿ ಸೇವೆಯನ್ನೂ ಪಡೆಯಬಹುದು ಎಂದು ಅವರು ಹೇಳಿದರು.

ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಮಾತನಾಡಿ, ಸಕಾಲ ಕಾಯ್ದೆಯ ಅಡಿಯಲ್ಲಿ 100 ಇಲಾಖೆಗಳಿಂದ ಒಟ್ಟು 1201 ಸೇವೆಗಳನ್ನು ಜನರಿಗೆ ನೀಡಲಾಗುತ್ತಿದೆ. ಪ್ರಸ್ತುತ ಸಾಲಿನಲ್ಲಿ 29 ಲಕ್ಷ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಈ ಪೈಕಿ ಶೇ.5ರಷ್ಟು ಸೇವೆಗಳನ್ನು ವಿಳಂಬವಾಗಿ ನೀಡಲಾಗಿದೆ. ಶೇ.7 ರಷ್ಟು ಅರ್ಜಿಗಳನ್ನು ತಿರಸ್ಕೃತಗೊಳಿಸಲಾಗಿದೆ ಎಂದರು.

ಸಕಾಲ ಕಾಯ್ದೆ ಸೆಕ್ಷನ್ 5(2) ರ ಪ್ರಕಾರ ಯಾವುದೇ ಅರ್ಜಿಯನ್ನು ತಿರಸ್ಕರಿಸಬೇಕಾದರೆ ಸೂಕ್ತ ಕಾರಣವನ್ನು ನಮೂದಿಸಬೇಕು. ಆದರೆ, ಅನೇಕರು ಈ ನಿಯಮವನ್ನು ಪಾಲಿಸಿಲ್ಲ ಎಂದು ಅವರು ಅಸಮಾಧಾನ ಹೊರಹಾಕಿದರು.

ಸಕಾಲಕ್ಕೆ ಮತ್ತಷ್ಟು ಹೊಸ ಸೇವೆ ಸೇರ್ಪಡೆ: ಸಕಾಲ ಕಾಯ್ದೆಯ ಅಡಿಯಲ್ಲಿ ಈಗಾಗಲೆ ಹಲವಾರು ಸೇವೆಗಳನ್ನು ಜನರಿಗೆ ಒದಗಿಸಲಾಗುತ್ತಿದೆ. ಇದರ ಜೊತೆಗೆ ಮತ್ತಷ್ಟು ಸೇವೆಗಳನ್ನು ಹೊಸದಾಗಿ ಸೇರಿಸಲಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಅಧೀನ ಇಲಾಖೆಗಳಾದ ರಾಜ್ಯ ಶುಶ್ರೂಷೆ ಪರಿಷತ್ತು, ಅರೆವೈದ್ಯಕೀಯ ಮಂಡಳಿ, ಶುಶ್ರೂಷೆ ಪರೀಕ್ಷಾ ಮಂಡಳಿ ಹಾಗೂ ರಾಜೀವ್ ಗಾಂದಿ ಆರೋಗ್ಯ ವಿಜ್ಞಾನಗಳ ವಿವಿಯ 130 ಹೊಸ ಸೇವೆಗಳನ್ನು ನೀಡಲು ಪ್ರಸ್ತಾವನೆ ಸಲ್ಲಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News