ನಾರಾಯಣಗುರುಗಳ ಅಧ್ಯಯನ ಪೀಠದ ಅನುಷ್ಠಾನದ ಬಗ್ಗೆ ಸರಕಾರ ಗಮನ ಹರಿಸಲಿದೆ: ಸಿಎಂ ಸಿದ್ದರಾಮಯ್ಯ

Update: 2023-12-10 15:30 GMT

ಬೆಂಗಳೂರು: ನಾರಾಯಣ ಗುರುಗಳ ಅಧ್ಯಯನ ಪೀಠ, ಕೋಟಿ ಚನ್ನಯ್ಯನವರ ಥೀಮ್ ಪಾರ್ಕಿಗೆ ನಮ್ಮ ಸರಕಾರ ಹಿಂದೆ 5 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗಿತ್ತು. ಈ ಪೈಕಿ ಅಧ್ಯಯನ ಪೀಠ ಮಾಡಲಾಗಿಲ್ಲ. ಅದರ ಅನುಷ್ಠಾನದ ಬಗ್ಗೆ ಸರಕಾರ ಗಮನ ಹರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ರವಿವಾರ ನಗರದ ಅರಮನೆ ಮೈದಾನದಲ್ಲಿ ಆರ್ಯ ಈಡಿಗ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದುಳಿದ ಜಾತಿಗಳ ಸಂಘಟನೆ, ಶಿಕ್ಷಣ, ಹೋರಾಟದ ಬಗ್ಗೆ ಹಾಗೂ ಈಡಿಗ ಸಮಾಜಕ್ಕೆ ಏನು ಅಗತ್ಯ ಎಂದು ಪ್ರಸ್ತಾಪ ಮಾಡಿದ್ದಾರೆ. ಅನೇಕ ಒತ್ತಾಯ ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ವಿಧಾನಮಂಡಲದ ಅಧಿವೇಶನ ನಡೆಯುತ್ತಿರುವುದರಿಂದ ಯಾವುದೇ ಭರವಸೆ ನೀಡಲಾಗುವುದಿಲ್ಲ. ಅಧಿವೇಶನ ಮುಗಿದ ಕೂಡಲೇ ಬೇಡಿಕೆಗಳ ಬಗ್ಗೆ ಸರಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದರು.

ನಾರಾಯಣಗುರುಗಳ ಜಯಂತಿಯನ್ನು ಸರಕಾರ ಮಾಡಬೇಕೆಂದು ಒತ್ತಾಯ ಮಾಡಿದ್ದ ಹಿನ್ನೆಲೆಯಲ್ಲಿ ಅವರ ಜಯಂತಿಯನ್ನು ರಾಜ್ಯ ಸರಕಾರವೇ ಆಚರಿಸುವಂತೆ ತೀರ್ಮಾನ ಮಾಡಲಾಯಿತು. ನಾರಾಯಣ ಗುರುಗಳ ಮಾರ್ಗದರ್ಶನ ಅವಶ್ಯ, ಅವರ ವಿಚಾರಗಳು, ಎಂದೆಂದಿಗೂ ಪ್ರಸ್ತುತ ಎಂದು ಅವರು ತಿಳಿಸಿದರು.

ನಾರಾಯಣಗುರುಗಳು ಕೇರಳದಲ್ಲಿ ಅವಮಾನಗಳನ್ನು ಸಹಿಸಿ ಅದರ ವಿರುದ್ಧ ಸಾತ್ವಿಕ ಕೋಪವಿದ್ದರೂ ಸಹಿಸಿ ಜನರ ಸಂಘಟನೆ ಮಾಡಿ, ಜಾಗೃತಿ ಮೂಡಿಸಲು, ಬದಲಾವಣೆ ತರಲು ಇಡೀ ಬದುಕನ್ನು ಮುಡಿಪಾಗಿಟ್ಟರು. ಆರ್ಥಿಕವಾಗಿ, ಸಾಮಾಜಿಕವಾಗಿ ವಂಚಿತರಾಗಿರುವ ಸಮಾಜದ ಉದ್ದಾರಕ್ಕಾಗಿ ಶ್ರಮಿಸಿದರು. ಮನುಷ್ಯರೆಲ್ಲರೂ ಒಂದೇ, ಜಾತಿ, ಒಂದೇ ಮತ, ಒಂದೇ ದೇವರು ಎಂದು ಹೇಳಿದ್ದರು ಎಂದು ಸಿದ್ದರಾಮಯ್ಯ ಸ್ಮರಿಸಿದರು.

ದೇವಸ್ಥಾನದೊಳಗೆ ದೇವರ ದರ್ಶನ ಮಾಡಲು ಶೂದ್ರರಿಗೆ ಅವಕಾಶವಿರಲಿಲ್ಲ. ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ದೇವರು ಯಾರ ಸ್ವತ್ತಲ್ಲ. ಹಾಗಾಗಿ ನೀವೇ ದೇವಸ್ಥಾನಗಳನ್ನು ಕಟ್ಟಿ ಎಂದು ನಾರಾಯಣಗುರುಗಳು ಕರೆ ನೀಡಿದ್ದರು. ಕೇರಳ, ಕರಾವಳಿಯಲ್ಲಿ ಅನೇಕ ದೇವಸ್ಥಾನ ಕಟ್ಟಿದ್ದರು. ಈಡಿಗರು, ಬಿಲ್ಲವರೇ ಈ ದೇವಾಲಯದ ಪೂಜಾರಿಗಳಾದರು. ಕುವೆಂಪು ಹೇಳಿದಂತೆ ಹುಟ್ಟುವಾಗ ವಿಶ್ವಮಾನವರಾಗಿರುವ ಮನುಷ್ಯರು ನಂತರ ಅಲ್ಪಮಾನವರಾಗುತ್ತಾರೆ. ವಿಶ್ವಮಾನವನಾಗುವ ದಾರಿಯಲ್ಲಿ ನಡೆಯುವ ಪ್ರಯತ್ನ ಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಜಾತಿ, ಧರ್ಮಗಳನ್ನು ಮೀರಿ ಬೆಳೆದವರ ಪರಂಪರೆಯಲ್ಲಿ ಕನಕದಾಸರು, ಬುದ್ಧ, ಬಸವ, ಅಂಬೇಡ್ಕರ್, ನಾರಾಯಣ ಗುರುಗಳು ಸೇರುತ್ತಾರೆ. ಮಾನವ ಸಮಾಜ ನಿರ್ಮಾಣವಾಗಬೇಕೆಂಬ ಕನಸು ಕಂಡಿದ್ದರು. ಮಾನವರು ಒಂದೇ ಜಾತಿ ಎಂದು ಸಾರಿದ್ದರು. ದಯೆಯೇ ಧರ್ಮದ ಮೂಲ ಹೇಳಿದ್ದರು. ಈ ದಾರಿಯಲ್ಲಿ ನಾವೆಲ್ಲರೂ ನಡೆಯಬೇಕು. ಅಂಬೇಡ್ಕರ್ ಅವರು ಹೇಳುವಂತೆ ಶಿಕ್ಷಣ, ಸಂಘಟನೆ, ಹೋರಾಟವನ್ನು ಅವಕಾಶ ವಂಚಿತರು ಮಾಡಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.

ಸಮಾವೇಶದಲ್ಲಿ ಆರ್ಯ ಈಡಿಗ ಸಂಘದ ಅಧ್ಯಕ್ಷ ಡಾ.ಎಂ.ತಿಮ್ಮೆಗೌಡ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ, ಚಿತ್ರನಟ ಶಿವರಾಜ್ ಕುಮಾರ್, ಶಾಸಕರು, ಮಾಜಿ ಸಚಿವರು ಉಪಸ್ಥಿತರಿದ್ದರು.

ಸಮಾಜದಲ್ಲಿ ಬದಲಾವಣೆ ತರಲು ಶ್ರಮ

ಸಮಾಜದಲ್ಲಿ ಆರ್ಥಿಕ, ಸಾಮಾಜಿಕ ಅಸಮಾನತೆ ಇದೆ. ಶತಮಾನಗಳ ಕಾಲ ಹಿಂದುಳಿದ, ಶೂದ್ರ ವರ್ಗ ಶಿಕ್ಷಣ ಸಂಸ್ಕತಿಯಿಂದ ವಂಚಿತವಾಗಿತ್ತು. ಜಾತಿ ವ್ಯವಸ್ಥೆಯಲ್ಲಿ ಚಲನೆಯಿಲ್ಲ. ಆರ್ಥಿಕ ಹಾಗೂ ಸಾಮಾಜಿಕ ಚಲನೆಯಿಲ್ಲದ ಸಮಾಜದಲ್ಲಿ ಬದಲಾವಣೆ ಸಾಧ್ಯವಿಲ್ಲ. ಇದಕ್ಕಾಗಿ ಶಿಕ್ಷಣ ಬಹಳ ಮುಖ್ಯ. ನಾರಾಯಣ ಗುರುಗಳು ಶಿಕ್ಷಣಕ್ಕೆ ಒತ್ತು ನೀಡಿದ್ದರು. ಶಿಕ್ಷಣದಿಂದ ತುಳಿತಕ್ಕೊಳಗಾದವರು ಸ್ವಾಭಿಮಾನಿ, ಸಶಕ್ತರಾಗಿ ಜೀವನ ನಡೆಸಲು ಸಾಧ್ಯ. ಆದರೆ ವೈಚಾರಿಕ ಚಿಂತನೆಯ ಗುಣಮಟ್ಟ ಶಿಕ್ಷಣದ ಕೊರತೆ ಇದೆ. ಬಸವಣ್ಣ, ಕನಕದಾಸರು, ನಾರಾಯಣಗುರುಗಳು ಸೇರಿದಂತೆ ಎಲ್ಲ ಮಹನೀಯರ ಆಶಯದಂತೆ ಸಮಾಜದಲ್ಲಿ ಸಮಾನತೆ ಬರಬೇಕು. ಶಿಕ್ಷಣದ ಮೂಲಕ ಆರ್ಥಿಕ, ಸಾಮಾಜಿಕ ಬದಲಾವಣೆ ಬರಬೇಕು

-ಸಿದ್ದರಾಮಯ್ಯ, ಮುಖ್ಯಮಂತ್ರಿ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News