ಡಿಕೆಶಿ ವಿರುದ್ಧದ ಸಿಬಿಐ ತನಿಖೆ ಹಿಂಪಡೆಯುವ ಸರಕಾರದ ನಿರ್ಧಾರ ಸಂವಿಧಾನಕ್ಕೆ ವಿರುದ್ಧ: ಬಿ.ವೈ. ವಿಜಯೇಂದ್ರ

Update: 2023-11-24 09:50 GMT

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಡಿಸಿಎಂ ಡಿ.ಕೆ. ಶಿವಕುಮಾರ್‌ ವಿರುದ್ಧ ಕೇಂದ್ರೀಯ ತನಿಖಾ ದಳದ(ಸಿಬಿಐ)ತನಿಖೆಗೆ ನೀಡಿದ್ದ ಅನುಮತಿಯನ್ನು ಹಿಂಪಡೆಯುವ ರಾಜ್ಯ ಸಚಿವ ಸಂಪುಟದ ನಿರ್ಧಾರ ಕಾನೂನಿಗೆ ವಿರುದ್ಧವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಶುಕ್ರವಾರ ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಅವರು, ʼಶಿವಕುಮಾರ್‌ ವಿರುದ್ಧ ಆದಾಯ ತೆರಿಗೆ(ಐಟಿ) ಇಲಾಖೆಯ ದಾಳಿಯಲ್ಲಿ ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ನಗದು ಪತ್ತೆಯಾದದ್ದನ್ನು ಆಧರಿಸಿ ಸಿಬಿಐ ತನಿಖೆ ನಡೆಸುತ್ತಿದೆ. ಜಾರಿ ನಿರ್ದೇಶನಾಲದಿಂದ ಕೂಡ ಅವರು ತನಿಖೆ ಎದುರಿಸುತ್ತಿದ್ದಾರೆ. ಡಿ.ಕೆ. ಶಿವಕುಮಾರ್‌ ಅಕ್ರಮ ಆಸ್ತಿ ಗಳಿಗೆ ಆರೋಪದ ಬಗ್ಗೆ ತನಿಖೆಯಲ್ಲಿ ಸಾಕ್ಷ್ಯಗಳು ಲಭಿಸಿವೆ ಎಂದು ಕೇಂದ್ರೀಯ ತನಿಖಾ ದಳವೇ(ಸಿಬಿಐ) ಹೇಳಿದೆ. ಈ ಹಂತದಲ್ಲಿ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆಯುವ ನಿರ್ಧಾರ ಮಾಡಿರುವುದು ಕಾನೂಬಾಹಿರವಾದುದುʼ ಎಂದರು.

ಡಿಕೆ ಶಿವಕುಮಾರ್‌ ಅಪರಾಧಿ ಎಂದು ನಾನು ಹೇಳುವುದಿಲ್ಲ. ಅದನ್ನು ನ್ಯಾಯಾಲಯ ತೀರ್ಮಾನ ಮಾಡಬೇಕು. ತನಿಖೆ ಎದುರಿಸಿ, ಆರೋಪಗಳಿಂದ ಮುಕ್ತರಾಗಿ ಹೊರಬರುವ ಅವಕಾಶ ಶಿವಕುಮಾರ್‌ ಮುಂದಿದೆ. ಆದರೆ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆಯುವ ತೀರ್ಮಾನವನ್ನು ಸಿಎಂ ಸಿದ್ದರಾಮಯ್ಯ ಅವರು ಕೈಬಿಡಬೇಕು ಎಂದು ಆಗ್ರಹಿಸಿದರು.

ಸಂಪುಟದ ನಿರ್ಧಾರ ಸಂಪೂರ್ಣವಾಗಿ ಕಾನೂನು, ಸಂವಿಧಾನಕ್ಕೆ ವಿರುದ್ಧವಾದುದು. ಈ ನಿರ್ಧಾರವನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ. ಕಾನೂನಾತ್ಮಕವಾಗಿ ಸಂಪುಟ ತೀರ್ಮಾನ ತೆಗೆದುಕೊಂಡಿದೆ ಎಂದು ಕಾನೂನು ಸಚಿವ ಎಚ್‌.ಕೆ. ಪಾಟೀಲ ಹೇಳಿದ್ದಾರೆ. ಆದರೆ ಇದು ಸಂಪೂರ್ಣ ಅಕ್ರಮ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೆಳಗಾವಿ ಅಧಿವೇಶನದಲ್ಲಿ ಡಿಕೆ ಶಿವಕುಮಾರ್‌ ಪ್ರಕರಣದ ಕುರಿತು ಹೋರಾಟ ನಡೆಸಲಾಗುವುದು. ಸಚಿವ ಝಮೀರ್‌ ಅಹಮದ್‌ ಖಾನ್‌ ಅವರು ಸ್ಪೀಕರ್‌ ಸ್ಥಾನದ ಕುರಿತು ಆಡಿರುವ ಮಾತುಗಳಿಗೂ ಅಧಿವೇಶನದಲ್ಲಿ ಪ್ರತಿಕ್ರಿಯೆ ನೀಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಈ ಬಗ್ಗೆ X ನಲ್ಲಿ ಬರೆದುಕೊಂಡಿರುವ ಬಿ.ವೈ ವಿಜಯೇಂದ್ರ," ಸಂವಿಧಾನದ ಘನತೆ, ಪ್ರಜಾಪ್ರಭುತ್ವದ ಮೌಲ್ಯ ಎತ್ತಿ ಹಿಡಿಯುವ ನಿಟ್ಟಿನಲ್ಲಿ ತನ್ನದಲ್ಲದ ತಪ್ಪಿಗೂ ನೈತಿಕ ಹೊಣೆ ಹೊತ್ತು ಅಧಿಕಾರ ತ್ಯಾಗಮಾಡಿದ ಹಲವು ಮಹನೀಯರು ಗೌರವದ ರಾಜಕಾರಣಕ್ಕೆ ಇತಿಹಾಸ ಬರೆದು ಹೋಗಿದ್ದಾರೆ. ಕರ್ನಾಟಕದ ರಾಜಕಾರಣಕ್ಕೆ ಕರಾಳ ಇತಿಹಾಸ ಬರೆಯಲೆಂದೇ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ತನ್ನ ಸಂಪುಟ ಸದಸ್ಯ ಡಿಕೆ ಶಿವಕುಮಾರ್ ರವರ ಮೇಲಿರುವ ಸಿಬಿಐ ತನಿಖೆಯ ಕೇಸ್ ಹಿಂತೆಗೆದು ಕೊಳ್ಳುವ ನಿಲುವು ತಳೆದಿರುವುದು ಸಾಂವಿಧಾನಿಕ ಹಾಗೂ ಪ್ರಜಾತಂತ್ರ ವ್ಯವಸ್ಥೆಯ ಮೇಲೆ ಸವಾರಿ ಮಾಡಿದ ಕ್ರಮವಾಗಿದೆ” ಎಂದು ರಾಜ್ಯ ಸರಕಾರದ ನಿರ್ಧಾರವನ್ನು ಟೀಕಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News