ಗ್ರಾ.ಪಂ. ಗ್ರಂಥಪಾಲಕರಿಗೆ ಕನಿಷ್ಠ ವೇತನ ನಿಗದಿ ಪಡಿಸಿ ರಾಜ್ಯ ಸರಕಾರ ಆದೇಶ
ಬೆಂಗಳೂರು, ಆ.17: ಗ್ರಾಮ ಪಂಚಾಯತಿ ಗ್ರಂಥಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಮಾಸಿಕ ಕನಿಷ್ಠ ಮೂಲವೇತನ ನಿಗದಿಪಡಿಸಿ, ಅವರ ಮಾಸಿಕ ವೇತನವನ್ನು ಹೆಚ್ಚಿಸಿ ಗುರುವಾರ ರಾಜ್ಯ ಸರಕಾರ ಆದೇಶಿಸಿದೆ.
ಕಳೆದ ಜು.27ರಂದು ರಾಜ್ಯ ಗ್ರಾಮ ಪಂಚಾಯತಿ ಗ್ರಂಥಾಲಯಗಳ ಗ್ರಂಥಪಾಲಕರ ಸಂಘದ ಪ್ರತಿನಿಧಿಗಳು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಗೆ ತಮ್ಮ ಹಲವಾರು ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿದ್ದರು, ಈ ಬೇಡಿಕೆಗಳಲ್ಲಿ ಪ್ರಮುಖವಾಗಿ ವೇತನ ಪರಿಷ್ಕರಣೆಯ ಬಗ್ಗೆ ಪ್ರಸ್ತಾಪ ಮಾಡಲಾಗಿತ್ತು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಸಮಾಜದ ಪ್ರಜ್ಞಾವಂತಿಕೆ ಹಾಗೂ ಗ್ರಾಮೀಣ ಯುವಜನರ ಉಜ್ವಲ ಭವಿಷ್ಯದ ಅವಕಾಶಕ್ಕೆ ಸಹಾಯಕವಾಗಿ ಗ್ರಾಮ ಪಂಚಾಯತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳು “ಅರಿವು ಕೇಂದ್ರ” ಗಳಾಗಿ ಕಾರ್ಯ ನಿರ್ವಹಿಸಬೇಕು, ಗ್ರಂಥಪಾಲಕರ ಕೆಲಸದ ಸಮಯವನ್ನು ಹೆಚ್ಚಿಸಬೇಕು ಎಂದು ಅವರು ಹೇಳಿದ್ದಾರೆ.
ಹೆಚ್ಚುವರಿ ಗಂಟೆಗಳು ಹಾಗೂ ವಿಭಜಿತ ಸಮಯವನ್ನು ಗಮನದಲ್ಲಿರಿಸಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಕನಿಷ್ಠ ಮಾಸಿಕ ಮೂಲ ವೇತನವನ್ನು ನಿಗದಿಪಡಿಸಿ ಜೊತೆಗೆ ಕಾರ್ಮಿಕ ಇಲಾಖೆ ಕಾಲಕಾಲಕ್ಕೆ ನಿಗದಿಪಡಿಸುವ ವ್ಯತ್ಯಯವಾಗುವ ತುಟ್ಟಿ ಭತ್ತೆಯನ್ನು ಪಾವತಿಸುವಂತೆ ಆದೇಶ ಹೊರಡಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬಸವಣ್ಣನವರ ‘ಅರಿವೇ ಗುರು' ತತ್ವದ ಆಶಯದಂತೆ ಗ್ರಂಥಾಲಯಗಳನ್ನು 'ಅರಿವು ಕೇಂದ್ರ'ಗಳನ್ನಾಗಿ ಮಾರ್ಪಡಿಸಿ ಗ್ರಾಮ ಪಂಚಾಯತಿ ಗ್ರಂಥಾಲಯಗಳನ್ನು ಗ್ರಾಮೀಣ ವಿಶ್ವವಿದ್ಯಾಲಯಗಳಂತೆ ರೂಪಿಸಲು ಈ ಮಹತ್ವಾಕಾಂಕ್ಷಿ ಹೆಜ್ಜೆ ಇರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಸಮೃದ್ಧ ಸಮಾಜ ನಿರ್ಮಿಸಲು, ಸ್ಥಿರ ಸಮಾಜದ ಅಗತ್ಯವಿದೆ. ಸ್ಥಿರ ಸಮಾಜ ನಿರ್ಮಾಣವಾಗಲು ಪ್ರಬುದ್ಧ ಸಮಾಜದ ಅಗತ್ಯವಿದೆ. ನಾಡಿನ ಗ್ರಂಥಾಲಯ ಹಾಗೂ ಇವುಗಳನ್ನು ಪೂರ್ಣಬಳಕೆಗೆ ಸನ್ನದ್ಧಗೊಳಿಸುವ ಗ್ರಂಥಪಾಲಕರನ್ನು ಸಬಲೀಕರಣಗೊಳಿಸಲು ಹೊರಡಿಸಲಾಗಿರುವ ಈ ಆದೇಶ ಪ್ರಬುದ್ಧ ಸಮಾಜದ ನಿರ್ಮಾಣಕ್ಕೆ ನಮ್ಮ ಸರಕಾರದ ಬದ್ಧತೆಯ ಪ್ರತೀಕವಾಗಿದೆ ಎಂದು ಪ್ರಿಯಾಂಕ್ ಖರ್ಗೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.