ಮನೆ ಬದಲಿಸುವವರಿಗೆ ಡಿ-ಲಿಂಕ್ ಸೌಲಭ್ಯ : ಗೃಹಜ್ಯೋತಿ ಲಾಭ ಪಡೆಯಲು ಅವಕಾಶ
ಬೆಂಗಳೂರು : ಮನೆ ಬದಲಾಯಿಸಿದ ನಂತರ ಗೃಹ ಜ್ಯೋತಿ ಯೋಜನೆಯ ಲಾಭ ಪಡೆಯಲು ಹಳೆ ಮನೆಯ ಆರ್.ಆರ್.ಸಂಖ್ಯೆಯನ್ನು ಡಿ-ಲಿಂಕ್ ಮಾಡುವ ಸೌಲಭ್ಯ ಈಗ ರಾಜ್ಯದ ಜನರಿಗೆ ಲಭ್ಯವಾಗಲಿದೆ. ಗೃಹ ಜ್ಯೋತಿಗೆ ಒಂದು ವರ್ಷ ಸಂದ ಸಂದರ್ಭದಲ್ಲಿ ಇಂಧನ ಇಲಾಖೆ ಈ ಪ್ರಕಟಣೆ ಹೊರಡಿಸಿದೆ.
ಬಾಡಿಗೆ ಮನೆ ಅಥವಾ ಯಾವುದೇ ಕಾರಣಕ್ಕೆ ಮನೆ ಬದಲಿಸುವ ಸಂದರ್ಭದಲ್ಲಿ ಹಳೆಯ ಖಾತೆ ಸಂಖ್ಯೆಯನ್ನು ಡಿ-ಲಿಂಕ್ ಮಾಡಿ, ಮತ್ತೊಂದು ಮನೆಯ ಆರ್.ಆರ್. ಸಂಖ್ಯೆಯೊಂದಿಗೆ ನೋಂದಣಿಯಾಗಿ, ಗೃಹ ಜ್ಯೋತಿಯ ಲಾಭ ಪಡೆಯಬಹುದಾಗಿದೆ.
ಡಿ-ಲಿಂಕ್ ಮಾಡುವುದು ಹೇಗೆ?: ಗ್ರಾಹಕರು https://sevasindhu.karnataka.gov.in/GruhaJyothi_Delink/GetAadhaarData.aspx ಲಿಂಕ್ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ. ಗೃಹ ಜ್ಯೋತಿ ಪೋರ್ಟಲ್ ಓಪನ್ ಆಗದೇ ಇದ್ದಲ್ಲಿ, Cache Memory Clear ಮಾಡಿ ನಂತರ ಪೋರ್ಟಲ್ ಲಿಂಕ್ ಕ್ಲಿಕ್ ಮಾಡಿ ಸೇವೆಯನ್ನು ಪಡೆಯಬಹುದಾಗಿದೆ.
ಮನೆ ಬದಲಿಸುವ ಸಂದರ್ಭಲ್ಲಿ ಆಧಾರ್ ನಂಬರ್ ಜತೆ ಲಿಂಕ್ ಆಗಿರುವ ಆರ್.ಆರ್. ನಂಬರ್ ವಿವರ ಪರಿಶೀಲಿಸಿ ಡಿ-ಲಿಂಕ್ ಮಾಡಬಹುದು. ಹೊಸ ಮನೆಗೆ ಗೃಹಜ್ಯೋತಿ ಲಾಭ ಪಡೆಯಲು ಸದ್ಯ ಯಾವುದೇ ಆಧಾರ್ ಜತೆ ಲಿಂಕ್ ಆಗಿರದ ಆರ್.ಆರ್. ನಂಬರ್‌ಗೆ ಲಿಂಕ್ ಮಾಡಬಹುದು. ಅಂದರೆ, ಈ ಹಿಂದೆ ಮನೆಯಲ್ಲಿ ವಾಸವಿದ್ದರೂ ಡಿ-ಲಿಂಕ್ ಮಾಡಿರುವುದನ್ನು ಖಾತ್ರಿ ಪಡಿಸಿಕೊಳ್ಳಿ.
ರಾಜ್ಯದ 1.56 ಕೋಟಿ ಜನರು ಗೃಹ ಜ್ಯೋತಿ ಯೋಜನೆಯ ಲಾಭ ಪಡೆದಿದ್ದಾರೆ. ವಿಶೇಷವಾಗಿ ಮಧ್ಯಮ ವರ್ಗದ ಜನರಿಗೆ ಹೆಚ್ಚಿನ ಅನುಕೂಲವಾಗಿದೆ. ವಿದ್ಯುತ್ ಬಿಲ್‍ನ ಹಣವನ್ನು ಮಕ್ಕಳ ಟ್ಯೂಷನ್ ಫೀ, ಹಿರಿಯರ ಔಷಧೋಪಚಾರಕ್ಕೆ ಬಳಸಿರುವುದಾಗಿ ಹೇಳಿಕೊಂಡಿದ್ದಾರೆ. ನುಡಿದಂತೆ ನಡೆದಿದ್ದೇವೆ ಎಂಬ ಸಾರ್ಥಕ ಭಾವ ನಮ್ಮಲ್ಲಿದೆ. ಜತೆಗೆ, ಡಿಲಿಂಕ್ ಸೌಲಭ್ಯ ಬೇಕೆಂದು ಜನ ಕೋರಿದ್ದರು. ಈಗ ಈ ಸೌಲಭ್ಯವನ್ನು ಒದಗಿಸಲಾಗಿದೆ. ಸಾಫ್ಟ್‍ವೇರ್ ನಲ್ಲಿ ಬದಲಾವಣೆ ಮಾಡಿ, ಜನತೆಗೆ ಈ ಸೌಲಭ್ಯ ಒದಗಿಸಲಾಗಿದೆ.
ಕೆ.ಜೆ.ಜಾರ್ಜ್, ಇಂಧನ ಸಚಿವ