ಬರ ಪರಿಸ್ಥಿತಿಯಿಂದ ಗ್ಯಾರಂಟಿ ಯೋಜನೆಗಳಿಗೆ ತೊಂದರೆಯಿಲ್ಲ: ಸಿಎಂ ಸಿದ್ದರಾಮಯ್ಯ
ಮೈಸೂರೂ:ʼʼಬರ ಪರಿಸ್ಥಿತಿಯಿಂದ ಗ್ಯಾರಂಟಿ ಯೋಜನೆಗಳಿಗೆ ತೊಂದರೆಯಿಲ್ಲ, ಅವು ಯಾವುದೇ ಅಡೆತಡೆಯಿಲ್ಲದೆ ಎಂದಿನಂತೆ ಅರ್ಹ ಫಲಾನುಭವಿಗಳನ್ನು ತಲುಪಲಿವೆʼʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಅವರು ಶನಿವಾರ ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ʼʼಬರ ಪರಿಸ್ಥಿತಿ ನಿವಾರಣೆಗೆ ಕೇಂದ್ರ ಸರ್ಕಾರಕ್ಕೆ ರೂ.48600 ಕೋಟಿ ನೀಡುವಂತೆ ಕೇಳಿದ್ದೇವೆ. ಬರದಿಂದ ಈಗಾಗಲೇ 32 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ನಷ್ಟ ಆಗಿದೆ.ಬೆಳೆ ನಷ್ಟ, ಮನೆ, ರಸ್ತೆ ಹಾಳಾಗಿರುವುದು ಸೇರಿದಂತೆ ಒಟ್ಟು 30 ಸಾವಿರ ಕೋಟಿ ನಷ್ಟ ಸಂಭವಿಸಿದೆ ಎಂದರು. ಕೇಂದ್ರ ಬರ ಅಧ್ಯಯನ ತಂಡ ಮೂರು ತಂಡಗಳಾಗಿ 11 ಜಿಲ್ಲೆಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಲಿದ್ದಾರೆ. ಅವರು ವರದಿ ನೀಡಿದ ಆಧಾರದ ಮೇಲೆ ಕೇಂದ್ರ ಸರ್ಕಾರ ಪರಿಹಾರ ನಿಗದಿ ಮಾಡಲಿದೆʼʼ ಎಂದು ತಿಳಿಸಿದರು.
ʼʼಮೋದಿಯವರು ಹೇಳುವುದಕ್ಕೂ, ಮಾಡುವುದಕ್ಕೂ ವ್ಯತ್ಯಾಸವಿದೆʼʼ
ʼʼನರೇಂದ್ರ ಮೋದಿಯವರು ಎಲ್ಲರನ್ನೂ ಒಳಗೊಂಡ ಸಮಾಜ, ಸಬ್ ಕೆ ಸಾಥ್, ಸಬ್ ಕಾ ವಿಕಾಸ್ ಎನ್ನುತ್ತಾರೆ. ಮುಸಲ್ಮಾನರಿಗೆ ಟಿಕೆಟ್ ಕೊಡದೆ ಹೋದರೆ ಸಬ್ ಕಾ ಸಾಥ್ ಆಗುತ್ತದೆಯೇ, ಎಲ್ಲರನ್ನೂ ಒಳಗೊಂಡಂತೆ ಆಗುತ್ತದೆಯೇ? ಹೇಳುವುದಕ್ಕೂ, ಮಾಡುವುದಕ್ಕೂ ವ್ಯತ್ಯಾಸವಿದೆ. ಹೇಳೋದು ಬೇರೆ, ವಸ್ತುಸ್ಥಿತಿ ಬೇರೆʼʼ ಎಂದು ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.