ಗ್ಯಾರಂಟಿ ಗೆ ದಲಿತ ಸಮುದಾಯಕ್ಕೆ ಮೀಸಲಿಟ್ಟ ಅನುದಾನ ಬಳಕೆ: ಛಲವಾದಿ ನಾರಾಯಣಸ್ವಾಮಿ

Update: 2023-12-15 11:46 GMT

ಬೆಳಗಾವಿ: ಗ್ಯಾರಂಟಿ ಯೋಜನೆಗಳಿಗೆ ದಲಿತ ಸಮುದಾಯಕ್ಕೆ ಮೀಸಲಿಟ್ಟ ಅನುದಾನ ಬಳಕೆ ಮಾಡುವ ಮೂಲಕ ರಾಜ್ಯದ ದಲಿತ ಸಮುದಾಯಗಳಿಗೆ ಅನ್ಯಾಯ ಆಗಿದ್ದು, ಇದರ ಹೋರಾಟ ಮುಂದುವರೆಸಲಾಗುವುದು ಎಂದು ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ, ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

ಶುಕ್ರವಾರ ಸುವರ್ಣ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 11 ಸಾವಿರ ಕೋಟಿ ರೂ. ಮೊತ್ತದ ದುರುಪಯೋಗ ಆಗಿದೆ. ಇದರ ಬಗ್ಗೆ ಸದನದಲ್ಲಿ ಚರ್ಚೆಗೆ ಅರ್ಧ ಗಂಟೆ ಕೊಡುವುದಾಗಿ ಹೇಳಿದ್ದರೂ ಅವಕಾಶ ನೀಡಿಲ್ಲ. ಗ್ಯಾರಂಟಿಗಳಿಗೆ ಎಸ್‍ಸಿ-ಎಸ್ಟಿ ಹಾಗೂ ಟಿಎಸ್‍ಪಿ ಹಣವನ್ನು ನೀಡಿದ್ದೀರಾ ಎಂಬ ಪ್ರಶ್ನೆಗೆ ಮೀಸಲು ಹಣದ ದುರುಪಯೋಗ ಆಗಲು ಬಿಡುವುದಿಲ್ಲ ಎಂದು ಉತ್ತರಿಸಿದ್ದಾರೆ. ಆದರೆ, ಮತ್ತೊಂದೆಡೆ ಸುತ್ತಿ ಬಳಸಿ ದುರುಪಯೋಗ ಆಗಲು ಬಿಡುವುದಿಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್ ಸರಕಾರದಿಂದ ದಲಿತರಿಗೆ ನಿರಂತರವಾಗಿ ಅನ್ಯಾಯ ಆಗುತ್ತಿದೆ. ಒಂದು ಕೈಯಿಂದ ಕೊಟ್ಟು ಇನ್ನೊಂದು ಕೈಯಿಂದ ಕಿತ್ತುಕೊಳ್ಳುತ್ತಿದ್ದಾರೆ. ಕೂಲಿ ಕೆಲಸ ಮಾಡುವ ನಮ್ಮವರಿಗೆ ಶಕ್ತಿ ಯೋಜನೆಯಡಿ ಬಸ್ ಪ್ರಯಾಣದ ಪ್ರಯೋಜನ ಆಗುವುದಿಲ್ಲ. ನಮ್ಮ ಸರಕಾರವೇ ಹಿಂದೆ 75 ಯೂನಿಟ್ ವಿದ್ಯುತ್ ಕೊಟ್ಟಿತ್ತು. ನಮ್ಮವರಿಗೆ ಮನೆ ಆಧಾರ್ ಇಲ್ಲ. ಮನೆಯೂ ಇಲ್ಲ. ಖಾತೆಯೂ ಇಲ್ಲ. ನಾಲ್ಕು ಯೋಜನೆಗಾಗಿ 11,700 ಕೋಟಿಯನ್ನು ತೆಗೆದಿದ್ದೀರಿ. ಯಾವ ಜಾತಿ ಎಂದು ಕೇಳಿ ಯೋಜನೆಗಳನ್ನು ಜಾರಿ ಮಾಡುತ್ತಿಲ್ಲ. ಜನಸಂಖ್ಯೆಗೆ ಆಧರಿಸಿ ಮೀಸಲು ನಿಧಿಯಿಂದ ಹಣವನ್ನು ವರ್ಗಾವಣೆ ಮಾಡಿದ್ದು, ಬೇರೆಯವರಿಗೆ ಇದು ಉಪಯೋಗ ಆಗಲಿದೆ ಎಂದು ದೂರಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News