ಮಹಿಳಾ ವೈದ್ಯರ ಸುರಕ್ಷತೆಗಾಗಿ ಶೀಘ್ರದಲ್ಲೆ ಮಾರ್ಗಸೂಚಿ : ಸಚಿವ ಶರಣ ಪ್ರಕಾಶ್ ಪಾಟೀಲ್

Update: 2024-08-23 15:26 GMT

ಸಚಿವ ಶರಣ ಪ್ರಕಾಶ್ ಪಾಟೀಲ್

ಬೆಂಗಳೂರು : ಕೊಲ್ಕತ್ತಾದಲ್ಲಿ ಮಹಿಳಾ ವೈದ್ಯೆ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶವ್ಯಾಪಿ ನಡೆದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮಹಿಳಾ ವೈದ್ಯಕೀಯ ಸಿಬ್ಬಂದಿ ಹಾಗೂ ಮಹಿಳಾ ವೈದ್ಯರ ಸುರಕ್ಷತೆಗಾಗಿ ಸ್ವಯಂಪ್ರೇರಿತವಾಗಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲು ಚಿಂತನೆ ನಡೆಸಿದೆ.

ಶುಕ್ರವಾರ ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕಿ ಡಾ.ಸುಜಾತಾ ರಾಥೋಡ್ ಅವರಿಗೆ ಮಹಿಳಾ ವೈದ್ಯರ ಸುರಕ್ಷತೆಯ ಬಗ್ಗೆ ಸಂಬಂಧಿಸಿದ ಎಲ್ಲ ಸಂಸ್ಥೆಗಳು, ಪಾಲುದಾರರನ್ನು ಸಂಪರ್ಕಿಸಿ ಸಮಗ್ರವಾದ ಮಾರ್ಗಸೂಚಿಯನ್ನು ರಚಿಸುವಂತೆ ಸೂಚಿಸಿದರು.

ಡಾ.ರಾಥೋಡ್ ಅವರಿಗೆ ಸರಕಾರಿ ವೈದ್ಯಕೀಯ ಕಾಲೇಜುಗಳ ಎಲ್ಲ ನಿರ್ದೇಶಕರು, ಸರಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು, ವೈದ್ಯರ ಸಂಘ ಸಂಸ್ಥೆಗಳೊಂದಿಗೆ ಸಮಾಲೋಚಿಸಲು ನಿರ್ದೇಶನ ನೀಡಿದರು. ಇದರೊಂದಿಗೆ ಖಾಸಗಿ ಆಸ್ಪತ್ರೆಗಳು, ಮಹಿಳಾ ವೈದ್ಯರು ಇನ್ನಿತರೆ ಪಾಲುದಾರರೊಂದಿಗೆ ಸಮಾಲೋಚಿಸಿ ಕಾಲೇಜುಗಳು ಮತ್ತು ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿ ವಿಶೇಷವಾಗಿ ಮಹಿಳಾ ವೈದ್ಯರ ಸುರಕ್ಷತೆಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ರೂಪಿಸುವಂತೆ ಅವರು ಹೇಳಿದರು.

ಈ ಹಿನ್ನೆಲೆಯಲ್ಲಿ ಮಹಿಳಾ ವೈದ್ಯರ ಸುರಕ್ಷತೆಗಾಗಿ ವೈದ್ಯಕೀಯ ಸಮುದಾಯದ ಸಲಹೆ ಸೂಚನೆಗಳಂತೆ ರಾಜ್ಯ ಸರಕಾರವು ಶೀಘ್ರವೇ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದೆ. ಈ ಮಾರ್ಗಸೂಚಿಗಳು ಸರಕಾರಿ ಹಾಗೂ ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಅನ್ವಯವಾಗುತ್ತವೆ ಎಂದು ಶರಣ ಪ್ರಕಾಶ್ ಪಾಟೀಲ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಕೊಲ್ಕತ್ತಾದ ಆರ್.ಜಿ.ಕರ್ ಮೆಡಿಕಲ್ ಕಾಲೇಜಿನಲ್ಲಿ 31 ವರ್ಷದ ವೈದ್ಯೆ ಮೇಲೆ ನಡೆದ ಅತ್ಯಾಚಾರವನ್ನು ತೀವ್ರವಾಗಿ ಖಂಡಿಸಿದ ಶರಣ ಪ್ರಕಾಶ್ ಪಾಟೀಲ್, ವೃತ್ತಿಪರ ಮಹಿಳೆಯರ ಮೇಲಾಗುವ ದೌರ್ಜನ್ಯವನ್ನು ಸರಕಾರ ಸಹಿಸುವುದಿಲ್ಲ ಮತ್ತು ಮಹಿಳಾ ವೈದ್ಯರ ಸುರಕ್ಷತೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ವೈದ್ಯಕೀಯ ವಿದ್ಯಾರ್ಥಿಗಳ ಶಿಷ್ಯ ವೇತನ ಪರಿಷ್ಕರಣೆ: ಸ್ನಾತಕೋತ್ತರ ವೈದ್ಯಕೀಯ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮತ್ತು ಸೀನಿಯರ್ ರೆಸಿಡೆಂಟ್ ವೈದ್ಯರ ಶಿಷ್ಯವೇತನ(ಸ್ಟೈಫಂಡ್)ವನ್ನು ಶೇ.25ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಶರಣ ಪ್ರಕಾಶ್ ಪಾಟೀಲ್ ತಿಳಿಸಿದರು.

ಶಿಷ್ಯವೇತನ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಮುಷ್ಕರಕ್ಕೆ ಕರೆ ನೀಡಿದ್ದರು. ಪರಿಷ್ಕೃತ ವೇತನ ಆಗಸ್ಟ್ 1ರಿಂದಲೇ ಜಾರಿಗೆ ಬಂದಿದ್ದು, ಶೇ.25ರಷ್ಟು ಹೆಚ್ಚಳವಾಗಲಿದೆ. ಸರಕಾರ ಶಿಷ್ಯ ವೇತನ ಹೆಚ್ಚಳ ಮಾಡಿದ ಬೆನ್ನಲ್ಲೇ ವೈದ್ಯರು ಮುಷ್ಕರವನ್ನು ಹಿಂಪಡೆದಿದ್ದಾರೆ ಎಂದು ಅವರು ಹೇಳಿದರು.

‘ಪರಿಷ್ಕೃತ ಶಿಷ್ಯವೇತನ’ :

ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು: 1ನೇ ವರ್ಷ–45 ಸಾವಿರ ದಿಂದ 56,250 ರೂ., 2ನೇ ವರ್ಷ- 50 ಸಾವಿರ ದಿಂದ 62,500 ರೂ., 3ನೇ ವರ್ಷ- 55 ಸಾವಿರ ದಿಂದ 68,750 ರೂ.ಗಳಿಗೆ ಪರಿಷ್ಕರಿಸಲಾಗಿದೆ.

ಸೂಪರ್ ಸ್ಪೆಷಾಲಿಟಿ ವೈದ್ಯ ವಿದ್ಯಾರ್ಥಿಗಳು: 1ನೇ ವರ್ಷ - 55 ಸಾವಿರ ದಿಂದ 68,750 ರೂ., 2ನೇ ವರ್ಷ- 60 ಸಾವಿರ ದಿಂದ 75 ಸಾವಿರ ರೂ. ಹಾಗೂ 3ನೇ ವರ್ಷ- 65 ಸಾವಿರ ದಿಂದ 81,250 ರೂ.ಗಳಿಗೆ ಪರಿಷ್ಕರಿಸಲಾಗಿದೆ. ಸೀನಿಯರ್ ರೆಸಿಡೆಂಟ್ಸ್ ವೈದ್ಯರ ಶಿಷ್ಯ ವೇತನ 60 ಸಾವಿರ ದಿಂದ 75 ಸಾವಿರ ರೂ.ಗಳಿಗೆ ಪರಿಷ್ಕರಿಸಲಾಗಿದೆ.

ಡಾ.ಶರಣಪ್ರಕಾಶ್ ಪಾಟೀಲ್, ವೈದ್ಯಕೀಯ ಶಿಕ್ಷಣ ಸಚಿವ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News