ಗೌರಿ ಲಂಕೇಶ್ ಹತ್ಯೆ ಪ್ರಕರಣ | ಜಾಮೀನಿನ ಮೇಲೆ ಹೊರಬಂದ ಆರೋಪಿಗಳಿಗೆ ಸಂಘ ಪರಿವಾರದಿಂದ ಸನ್ಮಾನ

Update: 2024-10-12 15:23 GMT

ಆರೋಪಿಗಳಿಗೆ ಸನ್ಮಾನ

ವಿಜಯಪುರ : ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ವಿಜಯಪುರದ ಇಬ್ಬರು ಆರೋಪಿಗಳು ಜಾಮೀನಿನ ಮೇಲೆ ಹೊರಬಂದು ತವರಿಗೆ ಆಗಮಿಸಿದ ಬೆನ್ನಲ್ಲೇ ಸಂಘಪರಿವಾರದ ಕಾರ್ಯಕರ್ತರು ಅವರಿಬ್ಬರಿಗೂ ಸನ್ಮಾನಿಸಿ ಅದ್ದೂರಿ ಸ್ವಾಗತ ಕೋರಿರುವ ಘಟನೆ ವರದಿಯಾಗಿದೆ.

ಪ್ರಕರಣದಲ್ಲಿ ಬಂಧಿತರಾಗಿದ್ದ ವಿಜಯಪುರದ ಇಬ್ಬರು ಆರೋಪಿಗಳಾದ ಪರಶುರಾಮ ವಾಗ್ಮೋರೆ ಹಾಗೂ ಮನೋಹರ್ ಯಡವೆ ಎಂಬ ಇಬ್ಬರಿಗೆ ಸುಮಾರು ಆರೂವರೆ ವರ್ಷಗಳ ಬಳಿಕ 2024ರ ಅ.11ರಂದು ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿತ್ತು. ಅ.11ರಂದೇ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಹೊರ ಬಂದ ಆರೋಪಿಗಳು ನೇರವಾಗಿ ವಿಜಯಪುರಕ್ಕೆ ಆಗಮಿಸಿದ್ದಾರೆ.

ಗೌರಿ ಲಂಕೇಶ್ ಹತ್ಯೆಯ ಇಬ್ಬರು ಆರೋಪಿಗಳು ವಿಜಯಪುರ ಜಿಲ್ಲೆಯ ಸಂಘಪರಿವಾರ ಹಾಗೂ ಶ್ರೀರಾಮ ಸೇನೆಯ ಮುಖಂಡರು, ಕಾರ್ಯಕರ್ತರು ಸ್ವಾಗತ ಮಾಡಿದ್ದಾರೆ. ವಿಜಯಪುರ ನಗರದ ಕಾಳಿಕಾ ದೇವಾಲಯದಲ್ಲಿ ಇಬ್ಬರೂ ಆರೋಪಿಗಳು ಪೂಜೆ ಮಾಡಿಸಿದ್ದಾರೆ. ಬಳಿಕ ಸಂಘಪರಿವಾರದ ಕಾರ್ಯಕರ್ತರು ಪರಶುರಾಮ ವಾಗ್ಮೋರೆ ಹಾಗೂ ಮನೋಹರ ಯಡವೆಗೆ ಶಾಲು ಹೊದಿಸಿ ಹಾರ ಹಾಕಿ ಸನ್ಮಾನಿಸಿದ್ದಾರೆ. ಬಳಿಕ ಶಿವಾಜಿ ವೃತ್ತಕ್ಕೆ ತೆರಳಿ ಶಿವಾಜಿ ಮೂರ್ತಿಗೆ ಆರೋಪಿಗಳು ಹಾರ ಹಾಕಿದ್ದಾರೆ ಎಂದು ತಿಳಿದು ಬಂದಿದೆ.

2017ರ ಸಪ್ಟೆಂಬರ್ 5ರಂದು ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಗುಂಡಿನ ದಾಳಿಯಿಂದ ಹತ್ಯೆ ಮಾಡಲಾಗಿತ್ತು. ಬಳಿಕ ವಿಜಯಪುರದ ಸಿಂದಗಿ ಪಟ್ಟಣದ ಬಸವನಗರ ನಿವಾಸಿ ಪರಶುರಾಮ್ ವಾಗ್ಮೋರೆ ಹಾಗೂ ಜಯಪುರ ತಾಲೂಕಿನ ರತ್ನಾಪೂರ ಗ್ರಾಮದ ಮನೋಹರ ಯಡವೆ ಎಂಬುವರನ್ನು ಗೌರಿ ಲಂಕೇಶ್ ಹತ್ಯೆ ಆರೋಪದ ಮೇಲೆ ಪ್ರಕರಣದ ತನಿಖೆ ನಡೆಸುತ್ತಿದ್ದ ವಿಶೇಷ ತನಿಖಾ ತಂಡ(ಎಸ್‌ಐಟಿ) ಬಂಧಿಸಿತ್ತು. ಗೌರಿ ಲಂಕೇಶ್ ಹತ್ಯೆಯಲ್ಲಿ ಒಟ್ಟು 25 ಜನ ಆರೋಪಿಗಳನ್ನು ಎಸ್‌ಐಟಿ ಬಂಧಿಸಿತ್ತು.

ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದರೂ ಆರೋಪಿಗಳಿಗೆ ಜಾಮೀನು ಸಿಕ್ಕಿರಲಿಲ್ಲ. ಗೌರಿ ಲಂಕೇಶ್ ಹತ್ಯೆ ನಂತರದಲ್ಲಿ ಸುಮಾರು ಆರುವರೆ ವರ್ಷಗಳ ಬಳಿಕ 25 ಜನ ಆರೋಪಿಗಳಲ್ಲಿ 18 ಜನರಿಗೆ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ ಜಾಮೀನು ನೀಡಿದ್ದು, ಇನ್ನೂ 7ಮಂದಿ ಆರೋಪಿಗಳಿಗೂ ಜಾಮೀನು ಸಿಗಲಿದೆ ಎನ್ನಲಾಗಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News