ಮೈಸೂರು ದಸರಾ : ವಿಶ್ವವಿಖ್ಯಾತ ಜಂಬೂ ಸವಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ
ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಐತಿಹಾಸಿಕ ಜಂಬೂ ಸವಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.
ಅಲಂಕೃತಗೊಂಡಿದ್ದ ಅಭಿಮನ್ಯು ಆನೆಯು ಚಿನ್ನದ ಅಂಬಾರಿಯನ್ನು ಹೊತ್ತು ಅರಮನೆ ಅಂಗಳಕ್ಕೆ ಆಗಮಿಸುತ್ತಿದ್ದಂತೆಯೇ ಜನಸ್ತೋಮದಿಂದ ಜಯಕಾರ ಮೊಳಗಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಭ ಕುಂಭ ಲಗ್ನದಲ್ಲಿ ಅಂಬಾರಿಗೆ ಪುಷ್ಪಾರ್ಚನೆ ಮಾಡಿದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಶಿವರಾಜ್ ತಂಗಡಗಿ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಪುಷ್ಪಾರ್ಚನೆ ವೇಳೆ ಹಾಜರಿದ್ದರು.
ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಒಡೆಯರ್ ಗೈರಾಗಿದ್ದರು. ಸಂಸದರಾಗಿ ಅವರಿಗೆ ಇದು ಮೊದಲನೇ ದಸರಾವಾಗಿತ್ತು.
ಪುಷ್ಪಾರ್ಚನೆ ಬಳಿಕ ಪೊಲೀಸ್ ಬ್ಯಾಂಡ್ ತಂಡದಿಂದ ರಾಷ್ಟ್ರಗೀತೆ ನುಡಿಸಲಾಯಿತು. ವಿಜಯದ ಸಂಕೇತವಾಗಿ 18 ಸುತ್ತು ಕುಶಾಲತೋಪು ಸಿಡಿಸಲಾಯಿತು. ತದನಂತರ ಬಿಗಿಭದ್ರತೆಯಲ್ಲಿ ಪೊಲೀಸ್ ಅಶ್ವದಳ, ನಾದಸ್ವರ, ರಾಜಲಾಂಛನಗಳ ದರ್ಬಾರಿನಲ್ಲಿ ಜಂಬೂಸವಾರಿ ಸಾಗಿತು. ಅರಮನೆ ಹೊರಗೆ ಕಾತರದಿಂದ ಕಾದಿದ್ದ ಲಕ್ಷಾಂತರ ಜನರು ಚಾಮುಂಡೇಶ್ವರಿ ದೇವಿಯನ್ನು ಕಣ್ತುಂಬಿಕೊಂಡರು.
ಮಧ್ಯಾಹ್ನ 1.50 ಕ್ಕೆ ಸಚಿವರು, ಶಾಸಕರೊಂದಿಗೆ ಅರಮನೆ ಆವರಣಕ್ಕೆ ಆಗಮಿಸಿದ್ದ ಮುಖ್ಯಮಂತ್ರಿಗಳು, 1.55ಕ್ಕೆ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ ವಿಜಯದಶಮಿಗೆ ಚಾಲನೆ ನೀಡಿದರು.
ಜಂಬೂ ಸವಾರಿಗೆ ಮೆರುಗು ನೀಡಿದ ಸ್ಥಬ್ಧ ಚಿತ್ರಗಳು :
ವಿಶ್ವವಿಖ್ಯಾತ ಜಂಬೂ ಸವಾರಿ ಮೆರಣಿಗೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳು, ಕೆಲವು ಇಲಾಖೆಗಳ ಪ್ರಗತಿಯನ್ನೊಳಗೊಂಡ ಸ್ಥಬ್ಧ ಚಿತ್ರಗಳು ಸಾಗುವ ಮೂಲಕ ಗಮನ ಸೆಳೆದವು. ಬೆಂಗಳೂರಿನಿಂದ ರಾಷ್ಟ್ರಪಿತ ಮಹಾತ್ಮಾಗಾಂಧಿ ಮತ್ತು ವಿಧಾನಸೌದ, ಚಾಮರಾಜನಗರದ ʼಸೋಲಿಗರ ಸೊಗಡು ಒಮ್ಮೆ ನೀ ಬಂದು ನೋಡುʼ, ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಲದ ʼಕ್ಷೀರ ಭಾಗ್ಯ ಮತ್ತು ಕ್ಷೀರ ಸಂಜೀವಿನಿ ಯೋಜನೆಗಳ ಯಶಸ್ವಿ ಪಥʼ ಸೇರಿದಂತೆ ಹಲವು ಸ್ಥಬದ್ಧ ಚಿತ್ರಗಳು ಮೆರವಣಿಗೆಗೆ ಮೆರುಗು ನೀಡಿದವು.