50:50 ಅನುಪಾತದಲ್ಲಿ ನಿವೇಶನ ಹಂಚಿಕೆ ರದ್ದು: ಮುಡಾ ಸಭೆಯಲ್ಲಿ ಚರ್ಚೆ, 10 ತಿಂಗಳ ಬಳಿಕ ನಡೆದ ಸಭೆ
ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ 50:50 ಅನುಪಾತದಡಿ ಹಂಚಿಕೆ ಮಾಡಲಾದ ನಿವೇಶನ ರದ್ದು ಮಾಡುವಂತೆ ಮುಡಾ ಸದಸ್ಯರು ಆಗ್ರಹಿಸಿದ್ದಾರೆ.
ಜಿಲ್ಲಾಧಿಕಾರಿಗಳೂ ಆದ ಮುಡಾ ಅಧ್ಯಕ್ಷ ಜಿ.ಲಕ್ಷ್ಮಿಕಾಂತರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ 10 ತಿಂಗಳ ಬಳಿಕ ನಡೆದ ಮುಡಾ ಸಭೆಯಲ್ಲಿ ಎಲ್ಲ ಸದಸ್ಯರು ನಿವೇಶನ ಹಂಚಿಕೆ ರದ್ದು ಮಾಡುವಂತೆ ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಕೆ.ಹರೀಶ್‌ಗೌಡ, ʼ50:50 ಅನುಪಾತದಡಿ ನೀಡಿರುವ ನಿವೇಶನಗಳ ಜಪ್ತಿಗೆ ಎಲ್ಲಾ ಸದಸ್ಯರು ಒಪ್ಪಿದ್ದಾರೆ. ಮುಡಾ ಸ್ವಚ್ಚವಾಗಬೇಕೆಂಬುದು ಎಲ್ಲರ ಅಭಿಪ್ರಾಯವಾಗಿದೆ. 2020ರಿಂದ 50:50 ಅನುಪಾತದ ಅಡಿಯಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಕೆಲವೊಂದು ಪ್ರಕರಣದಲ್ಲಿ ಪರಿಹಾರ ಪಡೆದವರೂ 50:50 ಅನುಪಾತದಡಿ ನಿವೇಶನ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡು ಸಭೆಯಲ್ಲಿ ನಾನು ಮಾತನಾಡಿದ್ದೇನೆ. ದಾಖಲೀಕರಣ ಮಾಡದ ಅಧಿಕಾರಿಗಳ ಮೇಲೆ ಎಫ್ಐಆರ್ ದಾಖಲು ಮಾಡಿ ಸರ್ಕಾರಕ್ಕೆ ಶಿಸ್ತು ಕ್ರಮಕ್ಕೆ ಪತ್ರ ಬರೆಯಲು ನಿರ್ಧರಿಸಲಾಗಿದೆʼ ಎಂದರು.
ʼದೇಸಾಯಿ ಆಯೋಗ ತನಿಖೆ ವರದಿಯ ನಂತರ ತೀರ್ಮಾನ ಮಾಡುವಂತೆ ಅಧ್ಯಕ್ಷರು ಹೇಳಿದ್ದಾರೆ. ಮಾಧ್ಯಮದವರನ್ನು ಒಳಗಿಟ್ಟು ಸಭೆ ನಡೆಸಬೇಕು ಎಂದು ಮನವಿ ಮಾಡಿದ್ದೇನೆ. ಮಾಧ್ಯಮದವರು ಇದ್ದರೆ ಭಯವಾದರೂ ಇರುತ್ತದೆ ಎಂಬ ಕಾರಣಕ್ಕೆ ಮನವಿ ಮಾಡಿದ್ದೇನೆʼ ಎಂದು ಹೇಳಿದರು.
ಅಕ್ರಮ ರದ್ದು ಮಾಡಿ: 50:50 ಅನುಪಾತದ ಬಗ್ಗೆ ಲೋಕಾಯುಕ್ತ, ಈ.ಡಿ, ದೇಸಾಯಿ ಆಯೋಗ ತನಿಖೆ ಮಾಡುತ್ತಿವೆ. ಅಕ್ರಮವಾಗಿರುವುದನ್ನು ರದ್ದು ಮಾಡಬೇಕು. ಕಾನೂನುನಾತ್ಮಕವಾಗಿ ಇರುವವರಿಗೆ ನೀಡಬೇಕು ಎಂದು ಒತ್ತಾಯಿಸಿದೆ. ತನಿಖಾ ವರದಿ ಬಂದ ಬಳಿಕ ಒಮ್ಮತದ ನಿರ್ಧಾರಕ್ಕೆ ಬರಲು ತೀರ್ಮಾನಿಸಲಾಗಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಸದಸ್ಯರಾದ ಜಿ.ಟಿ.ದೇವೇಗೌಡ, ಕೆ.ಹರೀಶ್ ಗೌಡ, ದರ್ಶನ್ ಧ್ರುವನಾರಾಯಣ, ಎ.ಬಿ.ರಮೇಶ್‌ಬಾಬು ಬಂಡಿಸಿದ್ದೇಗೌಡ, ಟಿ.ಎಸ್.ಶ್ರೀವತ್ಸ, ಎ.ಎಚ್.ವಿಶ್ವನಾಥ್, ಸಿ.ಎನ್.ಮಂಜೇಗೌಡ, ಕೆ.ವಿವೇಕಾನಂದ, ಮುಡಾ ಆಯುಕ್ತ ರಘುನಂದನ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ನಗರಪಾಲಿಕೆ ಆಯುಕ್ತ ಆಸಾದ್ ಉರ್ ರೆಹವಾನ್ ಷರೀಫ್ ಹಾಜರಾಗಿದ್ದರು.
ವರದಿ ಬಳಿಕ ಮುಂದಿನ ಕ್ರಮ : ಜಿ.ಲಕ್ಷ್ಮಿಕಾಂತ ರೆಡ್ಡಿ
50:50 ಅನುಪಾತದಡಿ ಹಂಚಿಕೆ ಮಾಡಿರುವ ನಿವೇಶನಗಳನ್ನು ರದ್ದುಪಡಿಸಲು ಕೈಗೊಂಡಿರುವ ತೀರ್ಮಾನವನ್ನು ಒಪ್ಪುತ್ತೇವೆ. ಆದರೆ, ಪಿ.ಎನ್.ದೇಸಾಯಿ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗ ವರದಿ ಬಂದ ನಂತರ ಜಪ್ತಿ ಮಾಡುವುದರ ಬಗ್ಗೆ ನಿರ್ಣಯ ಮಾಡಿ ಅಂಗೀಕರಿಸಿ ಮುಂದಿನ ಪ್ರಕ್ರಿಯೆ ಆರಂಭಿಸುವುದು ಸೂಕ್ತ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ ತಿಳಿಸಿದರು.