‘ಕಾಸ್ಟಿಂಗ್ ಕೌಚ್’ ಪ್ರಕರಣಗಳು ಕಂಡು ಬಂದರೆ ಕಠಿಣ ಕ್ರಮ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ನಂಥ ಪ್ರಕರಣಗಳು ಕಂಡು ಬಂದರೆ, ಸರಕಾರ ಕಠಿಣ ಕ್ರಮಕೈಗೊಳ್ಳಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲೂ ಕಾಸ್ಟಿಂಗ್ ಕೌಚ್ ಸದ್ದು ವಿಚಾರಕ್ಕೆ ಸಂಬಂಧಿಸಿದಂತೆ ಗುರುವಾರ ವಿಧಾನಸೌಧದ ಬಳಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆ ರೀತಿ ಏನಾದರೂ ಆಗಿದ್ದರೆ ಕ್ರಮ ತೆಗೆದುಕೊಳ್ಳಲಾಗುವುದು. ಮಹಿಳೆಯರ ರಕ್ಷಣೆಯೆ ನಮಗೆ ಮುಖ್ಯ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಆ ವಿಚಾರದ ಬಗ್ಗೆ ಭರವಸೆ ನೀಡಿದ್ದಾರೆ. ಮಹಿಳೆಯರ ರಕ್ಷಣೆಗೆ ಸರಕಾರ ಸದಾ ಬದ್ಧವಾಗಿದೆ. ಕಾಸ್ಟಿಂಗ್ ಕೌಚ್ ನಂತ ಪ್ರಕರಣಗಳು ಕಂಡು ಬಂದರೆ, ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ಶೀಘ್ರವೇ ಅಂಗನವಾಡಿ ಶಿಕ್ಷಕಿಯರಿಗೆ ವೇತನ: ಮೂರು ಜಿಲ್ಲೆಗಳ ಅಂಗನವಾಡಿ ಶಿಕ್ಷಕಿಯರಿಗೆ ಬಾಕಿ ಉಳಿದಿರುವ ವೇತನವನ್ನು ಶೀಘ್ರವೇ ಬಿಡುಗಡೆಗೊಳಿಸಲಾಗುವುದು. ಎಲ್ಲ ವಿಚಾರವೂ ಅಂಗನವಾಡಿ ಶಿಕ್ಷಕಿಯರಿಗೆ ಗೊತ್ತಿದೆ. ರಾಜ್ಯ ಸರಕಾರದಿಂದ 7 ಸಾವಿರ ರೂ., ಕೇಂದ್ರದಿಂದ 4 ಸಾವಿರ ರೂ. ನೀಡಲಾಗುತ್ತಿದೆ. ಈಗಾಗಲೇ ಕೇಂದ್ರ ಸಚಿವರ ಜೊತೆ ಮಾತನಾಡಿದ್ದೇನೆ. ಈ ಹಿಂದೆಯೂ ಹಲವು ಬಾರಿ ವೇತನ ವಿಳಂಬ ಆಗಿತ್ತು. ಗೌರಿ ಗಣೇಶ ಹಬ್ಬದೊಳಗೆ ಹಣ ಬಿಡುಗಡೆಗೆ ಪ್ರಯತ್ನ ಮಾಡುತ್ತೇವೆ ಎಂದು ಅವರು ಹೇಳಿದರು.