ಹಾಸನ: ಗ್ರಾಮಸ್ಥರ ನಿದ್ದೆಗೆಡಿಸಿದ್ದ ಕಾಡಾನೆ ಸೆರೆ
ಹಾಸನ: ಹಲವು ದಿನಗಳಿಂದ ಭಯದ ವಾತಾವರಣ ನಿರ್ಮಿಸಿದ್ದ ಕಾಡಾನೆಯನ್ನು ಶನಿವಾರ ಸೆರೆ ಹಿಡಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತಿಗೋಡು ಆನೆ ಕ್ಯಾಂಪ್‍ಗೆ ಸಾಗಿಸಿದ್ದಾರೆ.
ಕೊಡಗು ಜಿಲ್ಲೆಯ ದುಬಾರೆ ಹಾಗೂ ಮತ್ತಿಗೋಡಿನಿಂದ ಬಂದಿದ್ದ ಅಭಿಮನ್ಯು, ಸುಗ್ರೀವ, ಧನಂಜಯ, ಪ್ರಶಾಂತ, ಭೀಮಾ, ಹರ್ಷ, ಅಶ್ವಥ್ಥಾಮ ಮತ್ತು ಮಹೇಂದ್ರ ಎಂಬ ಎಂಟು ಸಾಕಾನೆಗಳನ್ನು ಕಾರ್ಯಾಚರಣೆಗೆ ಬಳಸಲಾಗಿತ್ತು.
ಆಲೂರು ತಾಲ್ಲೂಕಿನ ಪಾಳ್ಯ ಮತ್ತು ಕೆ. ಹೊಸಕೋಟೆ ಹೋಬಳಿ ವ್ಯಾಪ್ತಿಯ ಎಸ್ಟೇಟ್‍ನಲ್ಲಿ ಬೀಡು ಬಿಟ್ಟಿದ್ದ ಕಾಡಾನೆಯನ್ನು ಸ್ಥಳೀಯರು ‘ಸಾರಾ ಮಾರ್ಟಿನ್’ ಎಂದು ಕರೆಯುತ್ತಿದ್ದರು.ಒಂಟಿಯಾಗಿ ಓಡಾಡಿಕೊಂಡಿದ್ದ ಈ ಸಲಗ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿ ಮಾಡಿದರೂ ಜನರಿಗೆ ತೊಂದರೆ ಆಗಿರಲಿಲ್ಲ. ಡಿಸೆಂಬರ್ ತಿಂಗಳಲ್ಲಿ ಕಾರ್ಯಾಚರಣೆ ನಡೆಸಿದಾಗ, ಮೈಸೂರು ದಸರಾ ಅಂಬಾರಿ ಹೊತ್ತಿದ್ದ ಸಾಕಾನೆ ಅರ್ಜುನ ಸಾವನ್ನಪ್ಪಿತ್ತು. ಅದಕ್ಕಿಂತ ಮೊದಲು, ಶಾರ್ಪ್ ಶೂಟರ್ ವೆಂಕಟೇಶ್ ಭೀಮ ಎಂಬವರು ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದರು.
ಜ.12 ಶುಕ್ರವಾರ ಬೇಲೂರು ತಾಲ್ಲೂಕು ಬಿಕ್ಕೋಡು ಗ್ರಾಮದಲ್ಲಿ ಕಾರ್ಯಾಚರಣೆ ಆರಂಭವಾಗಿತ್ತು. ಶನಿವಾರ ಅರಣ್ಯ ಇಲಾಖೆ ಉಪ ನಿರ್ದೇಶಕ ಸೌರತ್‍ಕುಮಾರ್ ನೇತೃತ್ವದಲ್ಲಿ, ತಾಲ್ಲೂಕಿನ ಪಾಳ್ಯ ಹೋಬಳಿ ನಲ್ಲೂರು ಹಾಗೂ ಮುದ್ದನಾಯ್ಕನಹಳ್ಳಿಪುರ ಗ್ರಾಮಕ್ಕೆ ಸೇರಿದ ಎಸ್ಟೇಟ್‍ನಲ್ಲಿ ಕಾರ್ಯಾಚರಣೆ ನಡೆಸಿ ಕಾಡಾನೆಯನ್ನು ಸೆರೆಹಿಡಿಯಲಾಗಿದೆ.
‘ಮುಂದಿನ ದಿನಗಳಲ್ಲಿ ಸರ್ಕಾರ ಹಾಗೂ ಇಲಾಖೆ ಸೂಚನೆಯಂತೆ ಉಳಿದ ಆನೆಗಳನ್ನು ಸೆರೆ ಹಿಡಿಯಲು ಕ್ರಮ ಕೈಗೊಳ್ಳಲಾಗುವುದು’ ಎಂದು ಡಿಎಫ್‌ಒ ಸೌರತ್ ಕುಮಾರ್ ತಿಳಿಸಿದ್ದಾರೆ.