“ಹಿಂದುಳಿದ ವರ್ಗಗಳ ‌ಆಯೋಗ ನೀಡಿರುವ ವರದಿ ಸ್ವೀಕರಿಸಿದ್ದೀರಾ?” : ಪ್ರಮಾಣ ಪತ್ರ ಸಲ್ಲಿಸಲು ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ

Update: 2024-03-01 13:59 GMT

ಬೆಂಗಳೂರು : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನೀಡಿರುವ ವರದಿಯನ್ನು ಸ್ವೀಕರಿಸಲಾಗಿದೆಯೇ ಎಂಬುದನ್ನು ಪ್ರಮಾಣಪತ್ರ ಸಲ್ಲಿಸಲು ರಾಜ್ಯ ಸರಕಾರಕ್ಕೆ ಹೈಕೊರ್ಟ್ ನಿರ್ದೇಶನ ನೀಡಿದೆ.

ರಾಜ್ಯದಲ್ಲಿ ಜಾತಿ ಸಮೀಕ್ಷೆ ನಡೆಸಲು 2014ರ ಜನವರಿ 23ರಂದು ಸರಕಾರದ ಆದೇಶ ಪ್ರಶ್ನಿಸಿ, ಬೀದರ್‌ನ ಶಿವರಾಜ್ ಕಣಶೆಟ್ಟಿ ಮತ್ತು ಇತರರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್. ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಟಿ. ಜಿ. ಶಿವಶಂಕರೇಗೌಡರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಅರ್ಜಿಗಳ ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಜಿ.ಆರ್.ಗುರುಮಠ್ ವಾದ ಮಂಡಿಸಿ, 2015ರ ಮೇ 5ರಂದು ಜಾತಿ ಗಣತಿ ಮುಗಿದಿದೆ. ಈ ವರದಿಯು ಒಂಭತ್ತು ವರ್ಷಗಳಿಂದ ಹಾಗೇ ಉಳಿದಿದೆ. ಈಗ ಯಾವುದೇ ತುರ್ತು ಇಲ್ಲ. ವರದಿ ಸ್ವೀಕರಿಸಿರುವುದಕ್ಕೆ ಆಕ್ಷೇಪವಿಲ್ಲ. 1931ರ ಬಳಿಕ ಮೊದಲ ಬಾರಿಗೆ ಜಾತಿ ಸಮೀಕ್ಷೆ ನಡೆಸಲಾಗುತ್ತಿದೆ ಎಂದು 2014ರಲ್ಲಿ ಬಜೆಟ್ ಅಧಿವೇಶನದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನಕ್ಕೆ ತಿಳಿಸಿದ್ದರು. ಆದರೆ, ಜಾತಿ ಸಮೀಕ್ಷೆ ನಡೆಸಲು ಕೇಂದ್ರ ಸರಕಾರಕ್ಕೆ ಮಾತ್ರ ಅಧಿಕಾರವಿದೆ. 2015ರಲ್ಲಿ ಸಂಗ್ರಹಿಸಿರುವ ದತ್ತಾಂಶವನ್ನು ಹಿಂದುಳಿದ ವರ್ಗದ ವರದಿಗೆ ಮಾತ್ರ ಬಳಕೆ ಮಾಡಲಾಗುತ್ತದೆ. ಇದರಲ್ಲಿ ಜಾತಿ ಉಲ್ಲೇಖಿಸುವುದಿಲ್ಲ ಎಂದು ಸರಕಾರ ಹೇಳಿದರೆ ವಿವಾದವನ್ನು ಬಗೆಹರಿಸಬಹುದು ಎಂದರು.

ಅಲ್ಲದೆ, ಸಂವಿಧಾನದ 245 ಮತ್ತು 246ರ ಪ್ರಕಾರ ಜಾತಿ ಸಮೀಕ್ಷೆ ನಡೆಸುವ ಅಧಿಕಾರ ಕೇಂದ್ರ ಸರಕಾರಕ್ಕೆ ಮಾತ್ರ ಇದೆ. ರಾಜ್ಯ ಸರಕಾರಕ್ಕೆ ಅಧಿಕಾರ ಇಲ್ಲ. ಅಲ್ಲದೆ, ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಜಾತಿವಾರು ಸಮೀಕ್ಷೆ ನಡೆಸುವುದಕ್ಕೆ ಅಧಿಕಾರವೇ ಇಲ್ಲ. ಆದರೂ, ಸರಕಾರ ಸಮೀಕ್ಷೆ ನಡೆಸಿದೆ. ಜೊತೆಗೆ ಆ ವರದಿಯನ್ನು ಮುಖ್ಯಮಂತ್ರಿಗಳು ಸ್ವೀಕರಿಸಿದ್ದಾರೆ. ಅಲ್ಲದೆ, ಜಾತಿ ಗಣತಿ ವರದಿ ಸಲ್ಲಿಕೆ ಅಥವಾ ಅದರ ಸ್ವೀಕಾರದ ಸಂದರ್ಭದ ಬಗ್ಗೆ ನಾವು ಆಕ್ಷೇಪಿಸುವುದಿಲ್ಲ. ನಾವು ಸಾಂವಿಧಾನಿಕ ಮತ್ತು ಕಾನೂನಾತ್ಮಕ ವಿಚಾರಕ್ಕಷ್ಟೇ ಸೀಮಿತವಾಗಿದ್ದೇವೆ ಎಂದು ಪೀಠಕ್ಕೆ ತಿಳಿಸಿದರು.

ಈ ವೇಳೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು, ಜಾತಿ ಆಧಾರದಲ್ಲಿಯೇ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ ಗತಿ ಇಲ್ಲವೇ ಎಂದು ಪ್ರಶ್ನೆ ಮಾಡಿತು. ಇದಕ್ಕೆ ಪ್ರತಿಕ್ರಿಯಿಸಿದ ವಕೀಲರು ಜಾತಿ ಆಧಾರದಲ್ಲಿ ಶೈಕ್ಷಣಿಕ, ಸಾಮಾಜಿಕ ವರದಿ ಸಿದ್ಧಪಡಿಸಲಾಗಿದೆ, ಈಗಾಗಲೇ ಸರಕಾರ ಸ್ವೀಕರಿಸಿದೆ ಎಂದು ಮಾಹಿತಿ ನೀಡಿದರು. ಈ ವೇಳೆ ಸರಕಾರಿ ವಕೀಲರು, ವರದಿ ಸ್ವೀಕರಿಸಿರುವ ಸಂಬಂಧ ಮಾಹಿತಿ ಇಲ್ಲ. ಈ ಬಗ್ಗೆ ಯಾವುದೇ ಸರಕಾರದ ನಿರ್ದೇಶನ ಇಲ್ಲ ಎಂದು ಹೇಳಿದರು. ಏನೋ ಆಗಬಹುದು ಎಂಬ ಆತಂಕವನ್ನು ಏಕೆ ನಮ್ಮ ಅರ್ಜಿದಾರರ ಪರ ವಕೀಲರು ಆತಂಕ ವ್ಯಕ್ತಪಡಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಈ ಬಗ್ಗೆ ಮಾಹಿತಿ ನೀಡಲು ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಪೀಠ, “ಮುಂದಿನ ಕ್ರಮ ಜಾತಿ ಗಣತಿ ವರದಿಯನ್ನು ಸದನದಲ್ಲಿ ಮಂಡಿಸುವುದೇ? ಅವರ ನಡೆ ನಿಮಗೆ ಗೊತ್ತಿಲ್ಲವೇ? ಇದು ಸಂಪುಟಕ್ಕೆ ಹೋಗುತ್ತದೆಯೇ?” ಎಂದರು. ಅದಕ್ಕೆ ಅರ್ಜಿದಾರರ ಪರ ವಕೀಲರು, ಸದನದ ಮುಂದೆ ಮಂಡಿಸಬಹುದು ಅಥವಾ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಬಹುದು. ಪ್ರತಿವಾರ ಸಂಪುಟ ಸಭೆ ನಡೆಯುತ್ತದೆ. ಅವರ ಉದ್ದೇಶ ಏನು ಎಂದು ತಿಳಿಸಿಲ್ಲ ಎಂದು ತಿಳಿಸಿದರು. ವಾದ ಆಲಿಸಿದ ಪೀಠ ಸರಕಾರಕ್ಕೆ ಪ್ರಮಾಣ ಪತ್ರ ಸಲ್ಲಿಸಿ ಮಾಹಿತಿ ನೀಡುವಂತೆ ನಿರ್ದೇಶಿಸಿ ವಿಚಾರಣೆ ಮುಂದೂಡಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News