ಎಸ್‍ಸಿಪಿ-ಟಿಎಸ್‍ಪಿ ಅನುದಾನ | ಕೇಂದ್ರದ ಯೋಜನೆಗಳಿಗೆ ಇಲ್ಲದ ವಿರೋಧ ನಮಗೇಕೇ?: ಎಚ್.ಸಿ.ಮಹದೇವಪ್ಪ
ಬೆಂಗಳೂರು : ‘ಪರಿಶಿಷ್ಟರ ಕಲ್ಯಾಣಕ್ಕಾಗಿ ಎಸ್‍ಸಿಪಿ/ಟಿಎಸ್‍ಪಿ ಕಾಯ್ದೆಯಡಿ ಮೀಸಲಿಟ್ಟ ಅನುದಾನವನ್ನು 7 ‘ಡಿ’ ನಿಯಮದಡಿ ಈಗಾಗಲೇ ಕೇಂದ್ರ ಸರಕಾರದ ಯೋಜನೆಗಳ ಜತೆಗೆ ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಸೇರಿಸಲಾಗಿದೆ. ಆದರೆ, ಕೇಂದ್ರದ ಯೋಜನೆಗಳಿಗೆ ಇಲ್ಲದ ವಿರೋಧ ನಮಗೇಕೆ ಎಂದು ಅರ್ಥವಾಗುತ್ತಿಲ್ಲ’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಆಕ್ಷೇಪಿಸಿದ್ದಾರೆ.
ರವಿವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, "ಎಸ್‍ಸಿಪಿ/ಟಿಎಸ್‍ಪಿ ಅಡಿ ಮೀಸಲಿಟ್ಟ ಹಣ ಯಾವುದೇ ಕಾರಣಕ್ಕೂ ಎಸ್‍ಸಿ-ಎಸ್‍ಟಿ ವರ್ಗಗಳಿಗೆ ಅನ್ಯಾಯ ಆಗುವುದಿಲ್ಲ. ಬಿಜೆಪಿಯ ಅವಧಿಯಲ್ಲಿ 24ಸಾವಿರ ಕೋಟಿ ರೂ.ಗಳಿಗೆ ತಗ್ಗಿದ್ದ ಎಸ್‍ಸಿಪಿ/ಟಿಎಸ್‍ಪಿ ಹಣವನ್ನು ನಮ್ಮ ಸರಕಾರ 39ಸಾವಿರ ಕೋಟಿ ರೂ.ಗಳಿಗೆ ಏರಿಸಿದೆ ಎಂಬುದನ್ನು ಯಾರೂ ಮರೆಯಬಾರದು. ಇಲ್ಲಿ ಕೇಂದ್ರವು ಪರಿಶಿಷ್ಟರ ಅಭಿವೃದ್ಧಿಗೆ ಬಾಕಿ ಉಳಿಸಿಕೊಂಡ ಹಣ ನೀಡಿದರೆ ಆ ವರ್ಗಗಳಿಗೆ ಅನುಕೂಲವಾಗುತ್ತದೆ" ಎಂದು ಪ್ರತಿಪಾದಿಸಿದ್ದಾರೆ.
‘ಕನ್ನ’ ಸರಿಯಲ್ಲ: ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಟ್ಟ ಹಣವನ್ನು ಸಿದ್ದರಾಮಯ್ಯನವರಾಗಲಿ ಅಥವಾ ನಾನಾಗಲೀ ನಮ್ಮ ಸ್ವಂತ ಉಪಯೋಗಕ್ಕೆ ಬಳಸಿಕೊಂಡಿಲ್ಲ. ಸ್ವಾರ್ಥಕ್ಕೆ ಬಳಸಿಕೊಂಡರೇ ಮಾತ್ರವೇ ಅದು ‘ಕನ್ನ’ ಎನಿಸಿಕೊಳ್ಳುತ್ತದೆ. ಆದರೆ, ಸಮುದಾಯದ ಜನರ ಬದುಕಿಗೆ ಹಂಚಿಕೆ ಮಾಡಿದಾಗ ಅದು ಸಹಾಯ ಎನಿಸಿಕೊಳ್ಳುತ್ತದೆ’ ಎಂದು ಮಹದೇವಪ್ಪ ಹೇಳಿದ್ದಾರೆ.
ಎಸ್‍ಸಿಪಿ/ಟಿಎಸ್‍ಪಿ ಕಾಯ್ದೆಯನ್ನು ಇತಿಹಾಸದಲ್ಲೇ ಜಾರಿ ಮಾಡಿದ ಯಾವುದಾದರೂ ಸರಕಾರವಿದ್ದರೆ ಅದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ. ಈ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ಈ ನೆಲದ ಕಾನೂನು ಎಂದು ಬಣ್ಣಿಸಿದೆ. ಜೊತೆಗೆ ಗುತ್ತಿಗೆ ಮೀಸಲಾತಿ, ಭಡ್ತಿ ಮೀಸಲಾತಿ ಜಾರಿಗೊಳಿಸಿ ಈಗ ಹೊರಗುತ್ತಿಗೆ ಮೀಸಲಾತಿ ನೀಡುವ ಚಿಂತನೆ ನಮ್ಮ ಸರಕಾರಕ್ಕೆ ಇದೆ ಎಂದು ಅವರು ತಿಳಿಸಿದ್ದಾರೆ.